ಪಲಕ್ಕಾಡ್(ಕೇರಳ):ಇಲ್ಲಿನ ಶೋಲಾಯೂರ್ ನಿವಾಸಿಗಳಿಗೆ ಬೆನ್ನು ಬಿಡದೆ ಕಾಡುತ್ತಿದ್ದ ಆನೆಯೊಂದು ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿತ್ತು. ಇದೀಗ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಆನೆ ಪತ್ತೆಯಾಗಿದೆ.
ಕಳೆದ ಕೆಲವು ತಿಂಗಳಿನಿಂದ ಪಲಕ್ಕಾಡ್ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದ ಆನೆಯ ಬಾಯಿಯ ಭಾಗದಲ್ಲಿ ಗಂಭೀರವಾಗಿ ಗಾಯವಾಗಿರುವುದು ಬೆಳಕಿಗೆ ಬಂದಿದೆ.
ಈ ಆನೆ ಶೋಲಾಯೂರ್ ಭಾಗದಲ್ಲಿ 20ಕ್ಕೂ ಹೆಚ್ಚು ಮನೆಗಳ ಮೇಲೆ ದಾಳಿ ನಡೆಸಿದ್ದಲ್ಲದೆ, ಇಲ್ಲಿನ ನಿವಾಸಿಗಳ ನಿದ್ದೆಗೆಡಿಸಿತ್ತು. ಈ ಆನೆಯ ಉದ್ಧಟತನ ಕಂಡು ಇಲ್ಲಿನ ಸ್ಥಳೀಯರು ‘ಬುಲ್ಡೋಜರ್’ ಎಂದು ನಾಮಕರಣ ಮಾಡಿದ್ದರು.
ಇದೀಗ ಇಲ್ಲಿನ ಕೀರಿಪತಿ ಅರಣ್ಯ ಪ್ರದೇಶದಲ್ಲಿ ತೀವ್ರವಾಗಿ ಗಾಯಗೊಂಡಿರುವ ಸ್ಥಿತಿಯಲ್ಲಿ ಆನೆ ಪತ್ತೆಯಾಗಿದೆ. ಕಳೆದ ಹಲವು ತಿಂಗಳಿನಿಂದ ಈ ಆನೆ ಶೋಲಾಯೂರ್ ವರಂಗಂಪಾಡಿಯಲ್ಲಿ ಜೀವಭಯ ಸೃಷ್ಟಿಸಿತ್ತು. ಬಳಿಕ ಕೆಲವು ದಿನಗಳಿಂದ ಗ್ರಾಮೀಣ ಪ್ರದೇಶದಿಂದ ನಾಪತ್ತೆಯಾಗಿತ್ತು. ಇದಾದ ಬಳಿಕ ಆನಕಟ್ಟಿ ಪ್ರದೇಶದಲ್ಲಿ ವಾಸಿಸುವ ಆದಿವಾಸಿಗಳು ಗಾಯಗೊಂಡಿರುವ ಆನೆಯನ್ನು ಕಂಡು ಹತ್ತಿರದ ಅರಣ್ಯ ಪ್ರದೇಶಕ್ಕೆ ಮಾಹಿತಿ ನೀಡಿದ್ದಾರೆ.
ಬಾಯಿಯ ಭಾಗದಲ್ಲಿ ಹಲವು ಗಾಯವಾಗಿದ್ದ ಹಿನ್ನೆಲೆ ಕೆಲ ದಿನಗಳಿಂದ ಏನನ್ನು ಸೇವಿಸದೆ ಆನೆ ನಿತ್ರಾಣಗೊಂಡಂತೆ ಕಂಡುಬಂದಿತ್ತು. ಇದೀಗ ಅರಣ್ಯ ಇಲಾಖೆ ಸಿಬ್ಬಂದಿ ಆನೆಯನ್ನು ರಕ್ಷಿಸಿ, ಚಿಕಿತ್ಸೆ ಆರಂಭಿಸಿದ್ದಾರೆ.
ಬುಲ್ಡೋಜರ್ ಆನೆ ಅರಣ್ಯ ಗಡಿ ಭಾಗದಲ್ಲಿ ವಿಪರೀತ ದಾಳಿ ನಡೆಸುತ್ತಿತ್ತು. ಈ ಹಿನ್ನೆಲೆ ಅರಣ್ಯ ಇಲಾಖೆ ಆನೆಗೆ ರೇಡಿಯೋ ಕಾಲರ್ ಅಳವಡಿಸಿ ಅದರ ಮೇಲೆ ಕಣ್ಣಿಡಲು ನಿರ್ಧರಿಸಿತ್ತು. ಇತ್ತೀಚಿಗೆ ಕೇರಳ ಅರಣ್ಯ ಗಡಿ ಭಾಗದಲ್ಲಿ ಆನೆಗಳು ಹಾಗೂ ಜನರ ನಡುವೆ ಘರ್ಷಣೆ ಹೆಚ್ಚಾಗಿದ್ದು, ಈಚೆಗೆ ಕೊಯಮತ್ತೂರು ಅರಣ್ಯ ಭಾಗದಲ್ಲಿ 17 ಆನೆಗಳು ಸಾವನ್ನಪ್ಪಿವೆ.