ಹರ್ದೋಯಿ: ಊಟ ಬಡಿಸುವಲ್ಲಿ ವಿಳಂಬ ತೋರಿದ ಪತ್ನಿಯನ್ನು ಗಂಡನೊಬ್ಬ ಬರ್ಬರವಾಗಿ ಕೊಲೆ ಮಾಡಿ ಮುಚ್ಚಿ ಹಾಕಲು ಯತ್ನಿಸಿರುವ ಘಟನೆ ಹರ್ದೋಯಿಯಲ್ಲಿ ನಡೆದಿದೆ.
ಇಲ್ಲಿನ ಶ್ರೀಕೃಷ್ಣ ಪಕ್ಕದ ಗ್ರಾಮದಲ್ಲಿ ಜಾತ್ರೆ ನೋಡಲು ಪತಿ ತೆರಳಿದ್ದ. ಎರಡು ದಿನಗಳ ಬಳಿಕ ಪತಿ ಕೃಷ್ಣ ಮಧ್ಯೆರಾತ್ರಿ ಮನೆಗೆ ಬಂದಿದ್ದಾನೆ, ಹೆಂಡ್ತಿಗೆ ಊಟ ಬಡಿಸುವಂತೆ ಹೇಳಿದ್ದಾನೆ. ಈ ವೇಳೆ ಆತನ ಪತ್ನಿ ನಿದ್ರೆಯಲ್ಲಿದ್ದು, ಗಂಡನಿಗೆ ಊಟ ಬಡಿಸುವಲ್ಲಿ ನಿಧಾನಗತಿ ಅನುಸರಿಸಿದ್ದರಂತೆ.
ಊಟದ ವಿಷಯಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದು, ಶ್ರೀಕೃಷ್ಣ ಕಟ್ಟಿಗೆಯಿಂದ ತನ್ನ ಹೆಂಡ್ತಿ ಮೇಲೆ ಹಲ್ಲೆ ಮಾಡಿದ್ದಾನೆ. ನೋವು ತಾಳದೇ ಆ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೂಡಲೇ ಪಕ್ಕದ ಹೊಲದಲ್ಲಿ ಹೆಂಡ್ತಿಯ ಶವವನ್ನು ಎಸೆದು ಯಾರಿಗೂ ತಿಳಿಯದಂತೆ ಮನೆಗೆ ಬಂದಿದ್ದಾನೆ. ಬಳಿಕ ಶ್ರೀಕೃಷ್ಣ ನನ್ನ ಪತ್ನಿ ಕಾಣುತ್ತಿಲ್ಲವೆಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಇನ್ನು ತನಿಖೆ ಕೈಗೊಂಡ ಪೊಲೀಸರು ಶ್ರೀಕೃಷ್ಣನ ಮೇಲೆ ಅನುಮಾನ ವ್ಯಕ್ತಪಡಿಸಿ ವಿಚಾರಣೆಗೊಳಪಡಿಸಿದ್ದರು. ಆರೋಪಿ ಶ್ರೀಕೃಷ್ಣ ವಿಚಾರಣೆ ವೇಳೆ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.