ಲಖನೌ(ಉತ್ತರ ಪ್ರದೇಶ):ರಾಜಧಾನಿಯಲ್ಲಿ ಮುಖ್ಯಮಂತ್ರಿ ನಿವಾಸದ ಬಳಿಯಿರುವ ರೈಲ್ವೆ ಕಾಲೋನಿಯಲ್ಲಿ ಡಬಲ್ ಮರ್ಡರ್ ನಡೆದಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಸಿಎಂ ಮನೆ ಸಮೀಪವಿರುವ ರೈಲ್ವೆ ಅಧಿಕಾರಿಯ ಹೆಂಡತಿ, ಮಗ ಗುಂಡಿಗೆ ಬಲಿ ಸಿಎಂ ಯೋಗಿ ಆದಿತ್ಯನಾಥ್ ಅವರ ಅಧಿಕೃತ ನಿವಾಸದ ಬಳಿಯಿರುವ ರೈಲ್ವೆ ಕಾಲೋನಿಯಲ್ಲಿ ರೈಲ್ವೆ ಅಧಿಕಾರಿ ಆರ್. ಡಿ. ವಾಜಪೇಯಿ ಅವರ ಪತ್ನಿ ಮತ್ತು ಮಗನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಸುಜಿತ್ ಪಾಂಡೆ ಹಾಗೂ ಎಲ್ಲಾ ಉನ್ನತ ಅಧಿಕಾರಿಗಳು ದೌಡಾಯಿಸಿ ಪರಿಶೀಲಿಸುತ್ತಿದ್ದಾರೆ. ಆದರೆ, ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಲಖನೌ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಪೊಲೀಸ್ ಕಮಿಷನರ್ ಸುಜಿತ್ ಪಾಂಡೆ ಮಾತನಾಡಿ, ರೈಲ್ವೆಯ ಉನ್ನತ ಅಧಿಕಾರಿಯ ಮನೆಯಲ್ಲಿ ಘಟನೆ ನಡೆದಿದೆ. ಅವರ ಪತ್ನಿ ಮತ್ತು ಮಗನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಮಾಹಿತಿಯ ಪ್ರಕಾರ, ದಾಳಿಕೋರರು ತಲೆಗೆ ಗುಂಡು ಹಾರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಕರಣವು ಲೂಟಿಗಾಗಿ ನಡೆದಿರುವುದು ಎಂದು ತೋರುತ್ತಿಲ್ಲ. ಈ ಪ್ರಕರಣದಲ್ಲಿ ವಿವಿಧ ಅಂಶಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಕೊಲಗೀಡಾದ ಮಾಲ ಅವರಿಗೆ 42 ವರ್ಷ ಮತ್ತು ಅವರ ಮಗ ಶರದ್‌ಗೆ ಸುಮಾರು 22 ವರ್ಷ. ಇಬ್ಬರೂ ತಮ್ಮ ಕೋಣೆಗಳಲ್ಲಿ ಹಾಸಿಗೆಗಳ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳದಲ್ಲೇ, ವಿಧಿವಿಜ್ಞಾನ ತಂಡವು ವಿವಿಧ ಅಂಶಗಳನ್ನು ತನಿಖೆ ನಡೆಸುತ್ತಿದೆ.
ಇಂದು ಆರ್. ಡಿ. ವಾಜಪೇಯಿ ಅವರ ಜನ್ಮದಿನ. ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಅವರು ದೆಹಲಿಯಿಂದ ಲಖನೌಗೆ ಬಂದಿದ್ದಾರೆ. ಅವರ ಮನೆಯಲ್ಲಿ ಅಪ್ರಾಪ್ತ ವಯಸ್ಸಿನ ಮಗಳು ಸಹ ಇದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.