ನವದೆಹಲಿ: ದೇಶಾದ್ಯಂತ ಇಂದು ರಾಷ್ಟ್ರೀಯ ಕ್ರೀಡಾ ದಿನದ ಸಂಭ್ರಮ. ಪ್ರತಿ ವರ್ಷ ಆಗಸ್ಟ್ 29ರಂದು ಈ ದಿನಾಚರಣೆ ವಿಶೇಷವಾಗಿ ಆಚರಣೆ ಮಾಡುವುದರ ಹಿಂದಿದೆ ಒಂದು ರೋಚಕ ಕಾರಣ.
ಭಾರತದ ಖ್ಯಾತ ಹಾಕಿ ದಂತಕತೆ ಮೇಜರ್ ಧ್ಯಾನ್ ಚಂದ್ ಅವರ ಹುಟ್ಟುಹಬ್ಬವನ್ನು ಪ್ರತಿವರ್ಷ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.
ಆಗಸ್ಟ್ 29, 1905ರಂದು ಮೇಜರ್ ಧ್ಯಾನ್ ಚಂದ್ ಅಹಮದಾಬಾದ್ನಲ್ಲಿ ಜನ್ಮ ತಾಳಿದ್ದರು. ಅತ್ಯುತ್ತಮ ಹಾಕಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅವರು ಸುಮಾರು 400ಕ್ಕೂ ಅಧಿಕ ಗೋಲು ಗಳಿಸಿ ವಿಶೇಷ ದಾಖಲೆಯನ್ನೂ ತನ್ನ ಹೆಸರಿಗೆ ಬರೆಸಿಕೊಂಡಿದ್ದರು.
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮೂರು ಸಲ ಬಂಗಾರದ ಪದಕ ಗೆಲ್ಲುವಲ್ಲಿ ಮೇಜರ್ ಧ್ಯಾನ್ ಚಂದ್ ನೇತೃತ್ವದ ಹಾಕಿ ತಂಡ ಯಶಸ್ವಿಯಾಗಿತ್ತು. 1928, 1932 ಹಾಗೂ 1936ರಲ್ಲಿ ಭಾರತ ಈ ಗೌರವಕ್ಕೆ ಪಾತ್ರವಾಗಿತ್ತು. ಈ ಹಿರಿಮೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನದಂದೇ ಕ್ರೀಡಾ ಸಾಧಕರಿಗೆ ಅರ್ಜುನ, ರಾಜೀವ್ ಗಾಂಧಿ ಖೇಲ್ ರತ್ನ ಹಾಗು ದ್ರೋಣಾಚಾರ್ಯ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ.