ಹೈದರಾಬಾದ್ (ತೆಲಂಗಾಣ):ಪ್ರವಾಹ ಪೀಡಿತ ಸ್ಥಳದಲ್ಲಿ ಪರಿಶೀಲನೆ ನಡೆಸಲು ಬೋಟ್ ಮೂಲಕ ಬಂದ ಶಾಸಕನಿಗೆ ಮಹಿಳೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ಕಳೆದ ಎರಡು ದಿನಗಳಿಂದ ಭಾರಿ ಮಳೆಯಾದ ನಂತರ ಉಪ್ಪಾಳ್ ಕ್ಷೇತ್ರದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಶಾಸಕ ಸುಭಾಷ್ ರೆಡ್ಡಿ ಅವರು ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಶೀಲನೆಗಾಗಿ ಭೇಟಿ ನೀಡಿದಾಗ ಈ ವಾಗ್ವಾದ ನಡೆದಿದೆ.
ಶಾಸಕನೊಂದಿಗೆ ಮಹಿಳೆ ವಾಗ್ವಾದ ಎರಡು ದಿನಗಳಿಂದ ಮನೆಯಲ್ಲಿ ಸಿಲುಕಿಕೊಂಡಿದ್ದ ಮಹಿಳೆ ಶಾಸಕನನ್ನು ತರಾಟೆಗೆ ತೆಗೆದುಕೊಂಡಳು. ಈ ಪ್ರದೇಶದಲ್ಲಿ ಪ್ರವಾಹ ಉಂಟಾದ ಪರಿಣಾಮ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಮ್ಮ ದೈನಂದಿನ ಜೀವನಕ್ಕೆ ತೊಂದರೆಯಾಗಿದೆ ಎಂದು ಮಹಿಳೆ ತಮ್ಮ ಪರಿಸ್ಥಿತಿಯನ್ನು ಕೋಪದ ಮೂಲಕ ವಿವರಿಸಿದ್ದಾಳೆ.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ, ತಗ್ಗು ಪ್ರದೇಶದಲ್ಲಿ ಮನೆಗಳನ್ನು ನಿರ್ಮಿಸಿದ್ದೆ ಇದಕ್ಕೆ ಕಾರಣ ಎಂದರು. ಶಾಸಕರ ಉತ್ತರದಿಂದ ಕೆರಳಿದ ಮಹಿಳೆ ತಗ್ಗು ಪ್ರದೇಶದಲ್ಲಿ ಮನೆಗಳನ್ನು ನಿರ್ಮಾಣ ಮಾಡಲು ಅಧಿಕಾರಿಗಳು ಹೇಗೆ ಅನುಮತಿ ನೀಡಿದ್ರು. ಉತ್ತರ ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಅಲ್ಲದೆ ಕೋಪಗೊಂಡ ಮಹಿಳೆ ಮನೆ ಮೇಲಿಂದ ಕೆಳಗೆ ಹಾರುವುದಾಗಿ ಬೆದರಿಕೆ ಹಾಕಿದ್ದಾಳೆ.
"ನಾವು ಜೀವಂತವಾಗಿರಬೇಕೇ, ಅಥವಾ ಸಾಯಬೇಕೇ? ನಮಗೆ ನ್ಯಾಯ ಸಿಗದಿದ್ದರೆ, ನಮ್ಮ ಸಾವಿಗೆ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡುತ್ತೇವೆ" ಎಂದು ಮಹಿಳೆ ಎಚ್ಚರಿಕೆ ನೀಡಿದ್ದಾಳೆ.