ನವದೆಹಲಿ:ಲಾಕ್ಡೌನ್ ಆದೇಶದಿಂದ ದೇಶದ ಬಡಜನರಿಗೆ ತೊಂದರೆಯಾಗಿದೆ ನಿಜ. ಆದ್ರೆ, ಭವಿಷ್ಯದಲ್ಲಿ ಸಂಭವಿಸುವ ಬಹುದೊಡ್ಡ ಗಂಡಾಂತರ ತಪ್ಪಿಸಲು ಈ ಕ್ರಮ ದೇಶಕ್ಕೆ ಅನಿವಾರ್ಯವಾಗಿತ್ತು. ಇಂಥ ಸಂದರ್ಭದಲ್ಲಿ ದೇಶದ ಬಡಜನತೆಗೆ ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ ಸೌಲಭ್ಯಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಜನಸಾಮಾನ್ಯರಿಗೆ ರೇಷನ್, ಹಣ, ಆಹಾರ ಸೇರಿದಂತೆ ಮೂಲಭೂತ ಸೌಲಭ್ಯ ಸಿಗುವಂತೆ ಮಾಡುವಲ್ಲಿ ಮೋದಿ ಸರ್ಕಾರ ಯಶಸ್ವಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಪ್ರಧಾನ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸುಸ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಡಬ್ಲ್ಯೂಎಚ್‌ಒ ನಿರ್ದೇಶಕರ ಟ್ವೀಟ್ ನಲ್ಲೇನಿದೆ?
ಕೋವಿಡ್-19 ಹೊಡೆದೋಡಿಸಲು ಮನೆಯಲ್ಲೇ ಇರಿ ಎಂದು ಎಲ್ಲ ದೇಶಗಳೂ ಹೇಳುತ್ತಿವೆ. ಈ ಹಂತದಲ್ಲಿ ಬಡವರು ಹಾಗೂ ಕೂಲಿ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದು, ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಅಗತ್ಯ ಆಹಾರ ಮತ್ತು ಜೀವನ ಮೂಲಭೂತ ಸೌಲಭ್ಯ ಒದಗಿಸುವಂತೆ ನಾನು ಎಲ್ಲ ದೇಶಗಳಿಗೆ ಕರೆ ನೀಡುತ್ತೇನೆ ಎಂದಿದ್ದಾರೆ.
ಇದೇ ವೇಳೆ, ಪ್ರಧಾನಿ ಮೋದಿ ಅವರು ಜನಸಾಮಾನ್ಯರ ಅಗತ್ಯಕ್ಕಾಗಿ 1.7 ಲಕ್ಷ ಕೋಟಿ ರೂ ಪರಿಹಾರಾತ್ಮಕ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು, ಅವರ ನಿರ್ಧಾರ ಮೆಚ್ಚುವಂತಹದ್ದು ಎಂದಿದ್ದಾರೆ. 800 ಮಿಲಿಯರ್ ಜನರಿಗೆ ಉಚಿತ ಪಡಿತರ, 204 ಮಿಲಿಯನ್ ಮಹಿಳೆಯರಿಗೆ ಹಣ ಹಾಗೂ 80 ಮಿಲಿಯನ್ ಜನರಿಗೆ ಉಚಿತ ಅಡುಗೆ ಅನಿಲ ನೀಡುವ ನಿರ್ಧಾರ ಸ್ವಾಗತಾರ್ಹ ಎಂದಿದ್ದಾರೆ.