ಧ್ರುವ ಪ್ರದೇಶದ ನಂತರ ವಿಶ್ವದ ಎರಡನೇ ಅತಿದೊಡ್ಡ ಹಿಮನದಿ ಎನಿಸಿರುವ ಸಿಯಾಚಿನ್, ವಿಶ್ವದ ಅತ್ಯುನ್ನತ ಯುದ್ಧಭೂಮಿಯೆಂಬ ಹೆಗ್ಗಳಿಕೆ ಹೊಂದಿದೆ. ಆದಾಗ್ಯೂ ಇಲ್ಲಿನ ಪ್ರಾಕೃತಿಕ ವಾತಾವರಣ ಮಾತ್ರ ಎಂದಿಗೂ ಗಡಿಕಾಯುವ ಸೈನಿಕರ ಪಾಲಿಗೆ ಉತ್ತಮವಾಗಿಲ್ಲ. ಭಾರತದ ಗಡಿಭಾಗವಾಗಿರುವ ಇಲ್ಲಿನ ನೀರ್ಗಲ್ಲು ಪ್ರದೇಶದಲ್ಲೊಂದು ಸೇನಾ ಠಾಣೆಯಿದೆ. ಈ ಪ್ರದೇಶದಲ್ಲಿ ವಾಸ್ತವಿಕವಾಗಿ ಆಮ್ಲಜನಕದ ಲಭ್ಯತೆ ವಿರಳವಾಗಿದ್ದು, ಸಾವಿನ ವಲಯವೆಂದೇ ಕುಖ್ಯಾತಿ ಪಡೆದಿದೆ. ಇಲ್ಲಿನ ಹಿಮಪಾತ ಗಡಿ ಕಾಯುವ ಅನೇಕ ಸೈನಿಕರನ್ನು ಬಲಿ ತೆಗೆದುಕೊಂಡಿದೆ.
ಇದಕ್ಕೆ ನಿದರ್ಶನವೆಂಬಂತಿದೆ ಸೋಮವಾರ ಸಂಭವಿಸಿದ ಹಿಮಪಾತ. ಸುಮಾರು 20,000 ಅಡಿಗಳಷ್ಟು ಎತ್ತರದಲ್ಲಿರುವ ಠಾಣೆ ಬಳಿ ಭಾರೀ ಗಾತ್ರದ ಹಿಮವಿದ್ದು, ಸಂಗ್ರಹವಾದ ಹಿಮದಿಂದ ಜನ ಓಡಾಟದ ದಾರಿ ಸೃಷ್ಟಿಯಾಗಿದೆ. ಈ ದಾರಿಯಲ್ಲಿ ಭಾರತೀಯ ಸೈನಕರು ವಾಡಿಕೆಯ ಗಸ್ತು ನಡೆಸುತ್ತಾರೆ. ಮೊನ್ನೆ ಸೋಮವಾರ ಹೀಗೆ ಗಸ್ತು ತಿರುಗುತ್ತಿದ್ದಾಗ ಹಿಮಪಾತವಾಗಿದ್ದು, 8 ಸೈನಿಕರು ಇದಕ್ಕೆ ಬಲಿಯಾಗಿದ್ದಾರೆ.
ಇಲ್ಲಿನ ನೀರ್ಗಲ್ಲು(ಬಾನಾ ಟಾಪ್) ಪ್ರದೇಶ ಒಂದು ಹುಲ್ಲಿನ ಕಡ್ಡಿಯೂ ಬೆಳೆಯುವ ಸ್ಥಳವಾಗಿದ್ದು, ಸಾಲ್ಟೋರೊ ರಿಡ್ಜ್ ಮತ್ತು ಸಿಯಾಚಿನ್ ಹಿಮನದಿಯ ಸಮೀಪವಿದೆ. ದೇಶದ ಅತಿದೊಡ್ಡ ಶುದ್ಧ ನೀರಿನ ಸಂಗ್ರಹವೆನಿಸಿರುವ ಈ ಪ್ರದೆಶ ಸೈನಿಕರ ಪಾಲಿಗೆ ಮಾತ್ರ ಅತ್ಯಂತ ಅಪಾಯದ ಸ್ಥಳವೆನಿಸಿದೆ.
ಜೂನ್ 26, 1987 ರ ರಕ್ತಸಿಕ್ತ ಹೋರಾಟದಿಂದ ಜನಪ್ರಿಯವಾದ ಪ್ರದೇಶವಿದು. ಸುಬೇದಾರ್ ಮೇಜರ್ ಮತ್ತು ಗೌರವಾನ್ವಿತ ಕ್ಯಾಪ್ಟನ್ ಬಾನಾ ಸಿಂಗ್ ಅವರು ಈ ಪ್ರದೇಶದ 1,500 ಅಡಿ ಎತ್ತರದ ಹಿಮ ಗೋಡೆಯ ಮೇಲೆ ಸಣ್ಣ ತಂಡವನ್ನು ಮುನ್ನಡೆಸಿ, ಪಾಕಿಸ್ತಾನದ ವಶದಲ್ಲಿದ್ದ ಪ್ರದೇಶವನ್ನು ವಶಕ್ಕೆ ಪಡೆದುಕೊಂಡಿದ್ದು. ಈ ಕಾರಣಕ್ಕಾಗಿಯೇ 21,000 ಅಡಿಗಳಿಗಿಂತ ಹೆಚ್ಚು ಎತ್ತರದ ನೀರ್ಗಲ್ಲು ಪ್ರದೇಶವನ್ನು ಹೆಮ್ಮೆಯಿಂದ ಸ್ಮರಿಸಲಾಗುತ್ತದೆ.
ಸೋಮವಾರದ ದುರ್ಘಟನೆ ಮಾತ್ರ ಸಿಯಾಚಿನ್‌ನ ಇತಿಹಾಸವನ್ನು ಮತ್ತೊಮ್ಮೆ ಮೆಲುಕು ಹಾಕುವಂತೆ ಮಾಡಿದೆ. ತರಬೇತಿ ಪಡೆದ ಸೈನಿಕರು, ಸೇನಾ ಶ್ವಾನಗಳು, ಎತ್ತರ ಪ್ರದೇಶದ ಉಪಕರಣಗಳು ಮತ್ತು ಮಿಲಿಟರಿ ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡು ಮಾಡಿದ ರಕ್ಷಣಾ ಕಾರ್ಯಾಚರಣೆ ಕೂಡ ಫಲದಾಯವಾಗಲಿಲ್ಲ.ಭಾರೀ ಹಿಮದ ಅಡಿಯಲ್ಲಿ ಹೂತುಹೋದ ಸೈನಿಕರನ್ನು ಹೊರಗೆಳೆದು ವೈದ್ಯಕೀಯ ಚಿಕಿತ್ಸೆ ನೀಡಿದರೂ, ಘನೀಕರಿಸುವ ತಾಪಮಾನ ಮತ್ತು ಹೆಚ್ಚಿನ ಎತ್ತರದ ಅಪಾಯಗಳಿಂದಾಗಿ ಪ್ರಾಣಹಾನಿ ತಡೆಯಲು ಸಾಧ್ಯವಾಗಲಿಲ್ಲ. ಈ ದುರ್ಘಟನೆಯಲ್ಲಿ ನಾಲ್ಕು ಸೈನಿಕರು ಮತ್ತು ಇಬ್ಬರು ನಾಗರಿಕ ಸಹಾಯಕರು(ಪೋರ್ಟರ್) ಪ್ರಾಣ ಕಳೆದುಕೊಂಡರು.