ನವದೆಹಲಿ:ನರೇಂದ್ರ ಮೋದಿ ತಮ್ಮ ಐದು ವರ್ಷ ವಿನಾಶಕಾರಿಯಾಗಿ ಆಡಳಿತ ನಡೆಸಿದ್ದಾರೆ. ಈ ವೇಳೆ ದೇಶದ ಆರ್ಥಿಕತೆ ಪಾತಾಳಕ್ಕೆ ಇಳಿದಿದೆ. ದೇಶದ ಆಂತರಿಕ ಬೆಳವಣಿಗೆಗೆ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಕಾಳಜಿಯಿಲ್ಲ ಎಂದು ಟೀಕಿಸಿದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ವಿತ್ತ ಸಚಿವ ಅರುಣ್ ಜೇಟ್ಲಿ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಜೇಟ್ಲಿ, ಸಿಂಗ್ ಅವರು ಓರ್ವ ಅರ್ಥಶಾಸ್ತ್ರಜ್ಞ. ರಾಜಕಾರಣಿಯಾಗಿ ಬದಲಾದ ನಂತರ ಆತ ಆರ್ಥಿಕ ಸ್ವರೂಪ ಹಾಗೂ ರಾಜಕೀಯ ಎರಡರ ಬಗ್ಗೆಯೂ ಅರಿಯಲು ಸೋತಿದ್ದಾರೆ ಎಂದು ಟೀಕಿಸಿದ್ದಾರೆ.
2014ರಲ್ಲಿ ಡಾ. ಮನಮೋಹನ್ ಸಿಂಗ್ ಪ್ರಧಾನಿ ಸ್ಥಾನದಿಂದ ಕೆಳಗೆ ಇಳಿದ ಸಂದರ್ಭದಲ್ಲಿ ದೇಶ ದುರ್ಬಲವಾಗಿತ್ತು. ಅವರ ಯೋಜನೆಗಳೆಲ್ಲ ಹಳ್ಳ ಹಿಡಿದಿದ್ದವು. ಎಲ್ಲಡೆ ಭ್ರಷ್ಟಾಚಾರ ವ್ಯಾಪಿಸಿತ್ತು. ಮನಮೋಹನ್ ಸಿಂಗ್ ಅವರು ತಮ್ಮ ಪಕ್ಷದ ಸಾಮರ್ಥ್ಯವನ್ನು ಸಂಸತ್ತಿನಲ್ಲಿ ಕುಗ್ಗಿಸಿದ್ದಾರೆ. ಅವರ ಆಡಳಿತ ಇದ್ದಾಗ ಭಾರತ ದುರ್ಬಲ ದೇಶವಾಗಿತ್ತು. ಆದರೆ, ಇಂದು ಆರ್ಥಿಕವಾಗಿ ಜಗತ್ತಿನಲ್ಲೇ ವೇಗವಾಗಿ ಬೆಳೆಯುತ್ತಿರುವ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಟ್ವೀಟಿಸಿದ್ದಾರೆ.
ಸುದ್ದಿ ಸಂಸ್ಥೆಗೆ ಸಂದರ್ಶ ನೀಡಿದ್ದ ಡಾ. ಸಿಂಗ್, ಮೋದಿ ಅವರು ತಮ್ಮ ಐದು ವರ್ಷಗಳ ಆಡಳಿತ ಅವಧಿಯನ್ನು 'ಆಘಾತಕಾರಿ ಹಾಗೂ ವಿನಾಶಕಾರಿ'ಯಾಗಿ ಕಳೆದಿದ್ದಾರೆ. ಮತದಾರರು ಅವರಿಗೆ ನಿರ್ಗಮನದ ಹಾದಿ ತೋರಿಸಬೇಕು ಎಂದು ವ್ಯಂಗ್ಯವಾಡಿದ್ದರು.