ಕೇವಲ 15ನೇ ವಯಸ್ಸಿಗೆ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಗ್ರ್ಯಾಂಡ್‌ಮಾಸ್ಟರ್ ಆದ ಅತಿ ಕಿರಿಯ ಹೆಣ್ಣುಮಗಳು ಎಂಬ ವಿಶ್ವ ದಾಖಲೆ, 10ರಷ್ಟು ಎಳೆಯ ವಯಸ್ಸಿಗೇ ಕಿರಿಯರ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಮೂರು ಬಾರಿ ಚಿನ್ನದ ಪದಕ ಗೆದ್ದ ಹೆಗ್ಗಳಿಕೆ, ನಂತರ 2600 ಕ್ಕಿಂತ ಹೆಚ್ಚು ರೇಟಿಂಗಿನಲ್ಲಿ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್ ಪ್ರಶಸ್ತಿ. ಈ ಬಗೆಯ ಹಿರಿಮೆ-ಗರಿಮೆಗಳು ಭಾರತೀಯ ಮಹಿಳಾ ಕ್ರೀಡಾತಾರೆಯೊಬ್ಬರಿಗೆ ದೊರೆತ ಅರ್ಹ ಗೌರವಗಳು ! ಪಟ್ಟಿ ಇಲ್ಲಿಗೇ ನಿಲ್ಲುವಂತೆ ತೋರುತ್ತಿಲ್ಲ...
ಎಲ್ಲದಕ್ಕೂ ಕಳಶ ಇಟ್ಟಂತೆ, ಈಗ ಅವರ ಸಾಧನೆಗಳ ಮುಕುಟದಲ್ಲಿ ಮತ್ತೊಂದು ದೊಡ್ಡ ವಜ್ರ ಹೊಳೆಯುತ್ತಿದೆ! ಮದುವೆಯಾದ ನಂತರ, ಅದರಲ್ಲಿಯೂ ತಾಯಿಯಾದ ಬಳಿಕ ಆಕೆ ಸುಮಾರು 2 ವರ್ಷಗಳ ಕಾಲ ಆಟದಿಂದ, ಅಭ್ಯಾಸದಿಂದ ದೂರ ಉಳಿದಿದ್ದರು. ಈಗ, ಎರಡು ವರ್ಷಗಳ ಅಂತರದ ಬಳಿಕ, ಆಕೆ ಅಚ್ಚರಿಯ ಕೊಡುಗೆಯೊಂದಿಗೆ ಮತ್ತೆ ಚದುರಂಗದ ಕಣದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಆಶ್ಚರ್ಯದ ಸಂಗತಿ ಎಂದರೆ, ಅವರು ಗೆಲುವಿನ ಬಣ್ಣ ಮೆತ್ತಿಕೊಂಡೇ ರಂಗಕ್ಕಿಳಿದಿದ್ದರು ಮತ್ತು ನೋಡನೋಡುತ್ತಲೇ ಚದುರಂಗ ಜಗತ್ತಿನ ಎತ್ತರದ ಮಜಲಿನ ಮೇಲೆ ನಿಂತಿದ್ದರು. ಅರ್ಥಾತ್ 'ವಿಶ್ವ ಚಾಂಪಿಯನ್' ಆಗಿಬಿಟ್ಟಿದ್ದರು. ಅದರಲ್ಲಿಯೂ ಜಯ ತಂದುಕೊಟ್ಟ ವಿಭಾಗ ಆಕೆಯ ಆಟದ ಶೈಲಿಗೆ ಹೊರತಾದುದಾಗಿತ್ತು ಎಂಬುದು ವಿಶೇಷ! !
ಚಿನ್ನದ ರಾಣಿ ಹಂಪಿಯ ಶ್ರೇಷ್ಠತೆಯ ಬಗ್ಗೆ ಇನ್ನೇನು ಹೇಳಬಹುದು?
ಕೊನೆರು ಹಂಪಿ ಭಾರತೀಯ ಮಹಿಳಾ ಚದುರಂಗದಾಟದ ಓಂಕಾರ. ದೇಶದ ಮಹಿಳಾ ಚೆಸ್‌ನ ಅನೇಕ ಪ್ರಥಮಗಳು ಆಕೆಯ ಹೆಸರಿನೊಂದಿಗೆ ತಳಕು ಹಾಕಿಕೊಂಡಿವೆ. ವಿಶ್ವನಾಥನ್ ಆನಂದ್ ಅವರು ದೇಶದಲ್ಲಿ ಚದುರಂಗ ಕ್ರಾಂತಿಯನ್ನೇ ಎಬ್ಬಿಸಿದರು. ಹಂಪಿ ಅವರ ಸಾಧನೆ, ದೊರೆತ ಪುರಸ್ಕಾರಗಳಿಂದಾಗಿ ಈ ಕ್ರಾಂತಿ ಮಹಿಳಾ ಚೆಸ್ ರಂಗದಲ್ಲಿಯೂ ಸರಿಸಮನಾಗಿ ಮುಂದುವರಿದಂತಾಗಿದೆ. 1997ರಲ್ಲಿ, 10, 12, ಹಾಗೂ 14 ವರ್ಷದವರ ವಿಶ್ವ ಕಿರಿಯರ ಚಾಂಪಿಯನ್ ಆಗಿ ಹಂಪಿ ಹೊರಹೊಮ್ಮಿದರು. 2002ರಲ್ಲಿ, ಚೆಸ್ ಲೋಕದ ದಂತಕತೆ ಜುಡಿತ್ ಪೋಲ್ಗರ್ ಹೆಸರಿನಲ್ಲಿ ಇದ್ದ ದಾಖಲೆ ಮುರಿದ ಕಿರಿಯ ಮಹಿಳಾ ಕ್ರೀಡಾಪಟು (15 ವರ್ಷ ಮತ್ತು 67 ದಿನಗಳು) ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅದಾದ ಬಳಿಕ, ತನ್ನ ಉತ್ತುಂಗದ ಸ್ಥಿತಿಯಲ್ಲಿ ಅನೇಕ ಯಶಸ್ಸುಗಳು ಅವರ ಪಾಲಾದವು. ಇಷ್ಟಾದರೂ ವಿಶ್ವನಾಥನ್ ಆನಂದ್ ಅವರು ಜಯ ಗಳಿಸಿದ ಬಳಿಕ, ಅಭಿಮಾನಿಗಳಲ್ಲಿ ದೀರ್ಘಕಾಲದಿಂದ ಅಪಾರ ನಿರೀಕ್ಷೆ ಹುಟ್ಟುಹಾಕಿದ್ದ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿ ಆಕೆಯ ವೃತ್ತಿಜೀವನದಲ್ಲಿ ಸುಲಭವಾಗಿ ಕೈಗೆ ಎಟುಕದ ಹುಳಿ ದ್ರಾಕ್ಷಿಯಂತೆ ಕಾಡುತ್ತಿತ್ತು.
ಮದುವೆಯ ನಂತರ ಕಂಚು; ಮಕ್ಕಳಾದ ಬಳಿಕ ಚಿನ್ನ!
ಯಾವುದೇ ಆಟ ತೆಗೆದುಕೊಳ್ಳಿ. ಮದುವೆ ಆಗಿ ಮಕ್ಕಳಾದ ಬಳಿಕ ಮಹಿಳಾ ಕ್ರೀಡಾಪಟುವಿಗೆ ವೃತ್ತಿಜೀವನ ಇರುವುದಿಲ್ಲ ಎಂಬ ತಪ್ಪು ಕಲ್ಪನೆ ಇದೆ! ಇಷ್ಟಾದರೂ, ವಿವಾಹ ನೆರವೇರಿ ಅದರಲ್ಲಿಯೂ ವಿಶೇಷವಾಗಿ ಮಕ್ಕಳಾದ ಬಳಿಕ ಹಂಪಿ ತನ್ನ ವೃತ್ತಿಜೀವನದ ಮಹತ್ವದ ತಿರುವಿನಲ್ಲಿ ನಿಂತಿದ್ದರು. 2014 ರಲ್ಲಿ ದಾಸರಿ ಅನ್ವೇಶ್ ಅವರನ್ನು ಮದುವೆಯಾದ ಹಂಪಿ, ನಂತರದ ವರ್ಷದಲ್ಲಿ ನಡೆದ ವಿಶ್ವ ಮಹಿಳಾ ಚದುರಂಗ ಚಾಂಪಿಯನ್‌ಶಿಪ್‌ನಲ್ಲಿ (ಕ್ಲಾಸಿಕ್ ಫಾರ್ಮ್ಯಾಟ್) ಕಂಚಿನ ಪದಕ ಗೆದ್ದರು. ಆದರೆ ತಾಯ್ತನದ ಕಾರಣಕ್ಕಾಗಿ 2016ರ ಬಳಿಕ ಎರಡು ವರ್ಷಗಳ ಕಾಲ ಆಕೆ ಚದುರಂಗದಿಂದ ದೂರ ಉಳಿಯಬೇಕಾಯಿತು. ತಮ್ಮ ಮಗಳಿಗೆ ಒಂದು ವರ್ಷ ಆಗುವ ತನಕ ಆಕೆ ಆಟ ತ್ಯಜಿಸಿದರು. ಎರಡು ವರ್ಷಗಳ ಅಂತರದ ನಂತರ, ಕಳೆದ ವರ್ಷ ಆಕೆ ಪುನರಾಗಮನ ಮಾಡಿದ್ದು ಹಲವರ ಹುಬ್ಬೇರಲು ಕಾರಣ ಆಯಿತು. ಕಳೆದುಕೊಂಡ ಜಾಗದಲ್ಲಿಯೇ ಆಕೆ ಮತ್ತೆ ಗಳಿಸಲು ಸಾಧ್ಯವೇ? ಬಹುದೊಡ್ಡ ವಿರಾಮದ ಬಳಿಕ ಲಯ ಕಂಡುಕೊಳ್ಳಲು ಸಾಧ್ಯ ಇದೆಯೇ ಎಂಬ ಪ್ರಶ್ನೆಗಳು ಎದ್ದವು. ಆದರೆ ಆಕೆಯ ಸರಣಿ ಸಾಧನೆಗಳು ಈ ಅಪಸ್ವರಗಳಿಗೆ ತಿಲಾಂಜಲಿ ಇಟ್ಟಿವೆ. ಯಾವುದೇ ಅಂತಾರಾಷ್ಟ್ರೀಯ ಕೋಚ್ಗಳ ಬಾಹ್ಯ ತರಬೇತಿ ಪಡೆಯದೆ, ಕೇವಲ ತನ್ನ ತಂದೆಯ ನೆರವಿನಿಂದ ಆಕೆ ಮೊದಲಿನಂತೆ ಹುರುಪಿನ ಕ್ರೀಡಾಳುವಾಗಿ ಹೊರಹೊಮ್ಮಿದ್ದರು.