ಕರ್ನಾಟಕ

karnataka

ETV Bharat / bharat

23 ವರ್ಷ ಜೈಲಲ್ಲಿ ಕಳೆದಾತ ಬಿಡುಗಡೆಗೊಂಡಾಗ ಪೋಷಕರ ಸಮಾಧಿ ಮುಂದೆ ಕುಸಿದು ಬಿದ್ದ: ವೀಡಿಯೋ ವೈರಲ್

ಮಾಡದ ತಪ್ಪಿಗೆ ಸುದೀರ್ಘ ಸಮಯ ಜೈಲಿನ ಕತ್ತಲ ಕೂಪದಲ್ಲಿ ಕಳೆದ ಆತ ಕಳೆದುಕೊಂಡಿದ್ದು ತನ್ನ ಯೌವ್ವನ, ಪೋಷಕರು ಮತ್ತು ಜೀವನದ ಅಮೂಲ್ಯ ಎರಡುವರೆ ದಶಕಗಳನ್ನು. ಕೊನೆಗೂ ಜೈಲಿಂದ ಹೊರಬಂದಾಗ ಆತ ಮಾಡಿದ ಕೆಲಸ ನೋಡಿ ಸುತ್ತಲಿದ್ದವರು ಸ್ಥಬ್ದರಾಗಿ ನಿಂತಿದ್ದರು.

By

Published : Jul 26, 2019, 7:43 PM IST

Updated : Jul 26, 2019, 8:19 PM IST

ಅಲೀ ಭಟ್

ಶ್ರೀನಗರ: ಆತ ಅಲೀ ಭಟ್, ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಶ್ರೀನಗರ ನಿವಾಸಿ. ಮಾಡದ ತಪ್ಪಿಗೆ ಸುದೀರ್ಘ ಸಮಯ ಜೈಲಿನ ಕತ್ತಲ ಜಗದೊಳಗೆ ಕಳೆದ ನತದೃಷ್ಟ. ಈ ಅವಧಿಯಲ್ಲಿ ಆತ ಕಳೆದುಕೊಂಡಿದ್ದು ಆತನ ಯೌವ್ವನ, ಪೋಷಕರು ಮತ್ತು ಜೀವನದ ಅಮೂಲ್ಯ ಎರಡುವರೆ ದಶಕಗಳನ್ನು.

1996ರ ಸಾಮ್ಲೇಟಿ ಸ್ಪೋಟ ಪ್ರಕರಣದಲ್ಲಿ ಅಲೀಭಟ್ ಮತ್ತು ಇತರ ನಾಲ್ವರನ್ನು ಬಂಧಿಸಲಾಗುತ್ತದೆ. ಆ ಬಳಿಕ ವಿಚಾರಣೆ ನಡೆದು ನ್ಯಾಯಾಲಯ ಭಟ್ ಸೇರಿದಂತೆ ಐವರನ್ನು ಜೈಲಿಗೆ ತಳ್ಳುತ್ತದೆ.

ಅಲೀ ಭಟ್ ಜೈಲು ಸೇರಿದ್ದು 1997ರ ಜೂನ್ 8ರಂದು. ಇನ್ನುಳಿದ ನಾಲ್ವರು ಲತೀಫ್ ಅಹ್ಮದ್ ಬಾಜಾ (42), ಮಿರ್ಜಾ ನಿಸಾರ್ (39), ಅಬ್ದುಲ್ ಗೋನಿ (57), ಮತ್ತು ರಯೀಸ್ ಬೇಗ್ (56) ಜೂನ್ 17, 1996ರಂದು ಕತ್ತಲ ಕೂಪಕ್ಕೆ ತಳ್ಳಲ್ಪಟ್ಟಿದ್ದರು.

1996ರಲ್ಲಿ ಜೈಲು ಸೇರಿದ ಬಳಿಕ ಅಲೀ ಭಟ್ ಹೊರ ಜಗತ್ತು ನೋಡಿದ್ದೇ ಇಲ್ಲ. ಈ ನಡುವೆ ಆತ ತನ್ನ ಯೌವ್ವನ , ತಂದೆ ತಾಯಿ ಎಲ್ಲವನ್ನು ಕಳೆದುಕೊಳ್ಳುತ್ತಾನೆ. ಸುದೀರ್ಘ ಎರಡುವರೆ ದಶಕಗಳ ಜೈಲು ವಾಸದಲ್ಲಿ ಅಲೀ ಭಟ್ ಗೆ ಒಮ್ಮೆಯೂ ಪೆರೋಲ್ ಅಥವಾ ಬೇಲ್ ಸಿಕ್ಕಿದಿಲ್ಲ. ಈ ಸಮಯದಲ್ಲಿ ಅವನನ್ನು ದೆಹಲಿ, ಅಹಮದಾಬಾದ್ ಸೇರಿದಂತೆ ವಿವಿಧ ಜೈಲುಗಳಿಗೆ ವರ್ಗಾವಣೆ ಮಾಡಲಾಗಿತ್ತು. ಇದೀಗ ಯಾವುದೇ ಸಾಕ್ಷ್ಯಗಳಿಲ್ಲದ ಕಾರಣ ಸುದೀರ್ಘ 23 ವರ್ಷಗಳ ಬಳಿಕ ಅಲೀ ಭಟ್ ಮತ್ತು ಆತನೊಟ್ಟಿಗೆ ಜೈಲು ಪಾಲಾದವರು ಬಿಡುಗಡೆ ಭಾಗ್ಯ ಪಡೆದಿದ್ದಾರೆ.

ಪ್ರಕರಣ ಸಂಬಂಧ ಸಾಕ್ಷ್ಯಧಾರಾಗಳನ್ನು ಒದಗಿಸಲು ಪ್ರಾಸಿಕ್ಯೂಶನ್ ವಿಫಲವಾಗಿದೆ ಮತ್ತು ಪ್ರಕರಣದ ಮುಖ್ಯ ಆರೋಪಿ ಡಾ.ಅಬ್ದುಲ್ ಹಮೀದ್ ನಡುವೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು, ಅಲೀಭಟ್ ಮತ್ತು ಆತನೊಟ್ಟಿಗೆ ಜೈಲು ಪಾಲಾದ ಇತರ ನಾಲ್ವರನ್ನು ರಾಜಸ್ಥಾನ ಹೈಕೋರ್ಟ್ ಖುಲಾಸೆಗೊಳಿಸಿದೆ.

ಬಿಡುಗಡೆಗೊಂಡ ಎರಡು ದಿನಗಳ ಬಳಿಕ ಶ್ರೀನಗರಕ್ಕೆ ಮರಳಿದ ಅಲೀ ಭಟ್ ಮೊದಲು ಮಾಡಿದ ಕೆಲಸವೆಂದರೆ ಕಳೆದುಹೋದ ತನ್ನ ಹೆತ್ತವರ ಸಮಾಧಿ ನಮಸ್ಕರಿಸಿದ್ದು. ಹೆತ್ತವರು ಮರಣ ಹೊಂದಿದಾಗಲೂ ಮುಖ ನೋಡಲು ಭಾಗ್ಯ ಸಿಗದ ಅಲೀ ಭಟ್, ತನ್ನ ತಂದೆ ತಾಯಿಯ ಸಮಾಧಿಗೆ ಕಣ್ಣೀರ ಧಾರೆಯೊಂದಿಗೆ ಸಾಷ್ಟಾಂಗವೆರಗಿದಾಗ ಸುತ್ತಮುತ್ತ ನಿಂತ್ತಿದ್ದ ಜನರ ಕಣ್ಣುಗಳು ತೇವಗೊಂಡಿದ್ದವು. ಈ ವಿಷಯವನ್ನು ಆಕಾಶ್ ಹಸನ್ ಎಂಬಾತ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು ಸಖತ್ ವೈರಲ್ ಆಗಿದೆ.

ಬಿಡುಗಡೆಯಾದ ಬಳಿಕ ಐವರು ಮಾತನಾಡಿ, ಅಪರಾಧ ತನಿಖಾ ಇಲಾಖೆ ನಮ್ಮನ್ನು ಪ್ರಕರಣದ ಆರೋಪಿಗಳನ್ನಾಗಿ ಮಾಡುವವರೆಗೂ ನಾವು ಒಬ್ಬರಿಗೊಬ್ಬರು ಯಾರೆಂದು ಪರಿಚಯವಿರಲಿಲ್ಲ ಎಂದಿದ್ದಾರೆ. ಐವರಲ್ಲಿ ಬೇಗ್ ಆಗ್ರಾದಲ್ಲಿ ವಾಸಿಸುತ್ತಿದ್ದರೆ, ಗೋನಿ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯವನು ಮತ್ತು ಇತರರು ಶ್ರೀನಗರದವರು.

ಸುದೀರ್ಘ ಸಮಯ ಜೈಲಿನಲ್ಲಿ ಕಳೆದ ಈ ಇವರ ಹಿನ್ನಲೆ ಗಮನಿಸಿದರೆ, ಜೈಲು ಸೇರುವ ಮುನ್ನ ಅಲೀ ಭಟ್‌ ಕಾರ್ಪೆಟ್ ವ್ಯವಹಾರ ಮಾಡುತ್ತಿದ್ದ, ಬಾಜಾ ಕಾಶ್ಮೀರಿ ಕರಕುಶಲ ವಸ್ತುಗಳನ್ನು ದೆಹಲಿ ಮತ್ತು ಕಠ್ಮಂಡುವಿನಲ್ಲಿ ಮಾರಾಟ ಮಾಡುತ್ತಿದ್ದ, ನಿಸಾರ್ ಒಂಬತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ ಮತ್ತು ಗೋನಿ ಶಾಲೆಯನ್ನು ನಡೆಸುತ್ತಿದ್ದ.

ಪ್ರಕರಣದ ಹಿನ್ನಲೆ: ಮೇ 22, 1996 ರಂದು ಜೈಪುರ-ಆಗ್ರಾ ಹೆದ್ದಾರಿಯ ದೌಸಾ ಸ್ಯಾಮ್ಲೆಟಿ ಗ್ರಾಮದ ಬಳಿ ಆಗ್ರಾದಿಂದ ಬಿಕನೇರ್ ಗೆ ತೆರಳುತ್ತಿದ್ದ ಬಸ್‌ನಲ್ಲಿ ಬಾಂಬ್ ಸ್ಫೋಟಗೊಂಡು 14 ಜನರು ಸಾವನ್ನಪ್ಪಿದ್ದರು ಮತ್ತು 37 ಮಂದಿ ಗಾಯಗೊಂಡಿದ್ದರು. ಈ ಘಟನೆ ನಡೆದಿದ್ದು ದೆಹಲಿಯಲ್ಲಿ ಲಜಪತ್ ನಗರ ಬಾಂಬ್ ಸ್ಫೋಟ ನಡೆದು ಒಂದು ದಿನದ ಬಳಿಕವಾಗಿತ್ತು. ಲಜಪತ್ ನಗರ ಸ್ಪೋಟದಲ್ಲಿ 13 ಜನರು ಸಾವನ್ನಪ್ಪಿದ್ದರು. ಈ ಎರಡು ಘಟನೆಗಳ ಬಳಿಕ ಜಮ್ಮು ಕಾಶ್ಮೀರ ವಿಮೋಚನಾ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು 1996 ರಲ್ಲಿ ಜೈಪುರದಲ್ಲಿ ನಡೆದ ಸವಾಯಿ ಮನ್ ಸಿಂಗ್ ಕ್ರೀಡಾಂಗಣ ಸ್ಫೋಟದಲ್ಲಿ ಭಾಗಿಯಾಗಿದ್ದಾರೆ ಎಂದು ಈ ಐವರು ಯುವಕರ ಮೇಲೆ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಇದೀಗ ಆರೋಪ ಸಾಬೀತಾಗುವಲ್ಲಿ ಸೋತಿದ್ದು, ಹೈಕೊರ್ಟ್ ಆರೋಪಿಗಳನ್ನು ಖುಲಾಸೆಗೊಳಿಸಿದೆ.

ಸ್ಯಾಮ್ಲೆತಿ ಪ್ರಕರಣದಲ್ಲಿ ಒಟ್ಟು 12 ಜನರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ, ಇದರಲ್ಲಿ ಈವರೆಗೆ ಏಳು ಮಂದಿಯನ್ನು ಖುಲಾಸೆಗೊಳಿಸಲಾಗಿದೆ.

Last Updated : Jul 26, 2019, 8:19 PM IST

ABOUT THE AUTHOR

...view details