ನಮ್ಮ ದೇಶದಲ್ಲಿ ಈರುಳ್ಳಿ ಕೃಷಿ
ನಮ್ಮ ದೇಶದಲ್ಲಿ ವರ್ಷಕ್ಕೆ 1.20 ದಶಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಉತ್ಪಾದಿಸಲಾಗುತ್ತದೆ. ಪ್ರತಿ ವರ್ಷ ಒಟ್ಟು 19.40 ದಶಲಕ್ಷ ಟನ್ ಹಾಗೂ, ಹೆಕ್ಟೇರಿಗೆ ಸರಾಸರಿ 16 ಟನ್ ಈರುಳ್ಳಿ ಬೆಳೆಯಲಾಗುತ್ತದೆ. ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ ಹಾಗೂ ತೆಲಂಗಾಣ ಈರುಳ್ಳಿ ಉತ್ಪಾದಿಸುವ ಪ್ರಮುಖ ರಾಜ್ಯಗಳು. ಮಹಾರಾಷ್ಟ್ರವೊಂದರಲ್ಲೇ ಮುಂಗಾರಿನ ವೇಳೆಗೆ 76,279 ಹೆಕ್ಟೇರ್‌ನಲ್ಲಿ ಈರುಳ್ಳಿ ಬಿತ್ತನೆಯಾಗಿದೆ. ಇತ್ತ, ಕರ್ನೂಲ್ ಮಾರುಕಟ್ಟೆಯಲ್ಲಿ ಸೋಮವಾರ ಕ್ವಿಂಟಾಲ್ ಈರುಳ್ಳಿ ಬೆಲೆ ರೂ. 10,150 ದಾಟಿತ್ತು.
ಏಕೆ ಸಮಸ್ಯೆ?
ಈರುಳ್ಳಿ ಕೃಷಿಯಲ್ಲಿ ತೊಡಗಿರುವ ರಾಜ್ಯಗಳಲ್ಲಿ ಮಧ್ಯಮದಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಸಾಮಾನ್ಯ ಮಳೆಗೆ ಹೋಲಿಸಿದರೆ, ಮಹಾರಾಷ್ಟ್ರದಲ್ಲಿ ಒಂದೂವರೆ ಪಟ್ಟು, ಗುಜರಾತ್ನಲ್ಲಿ ಎರಡು ಪಟ್ಟು, ಮಧ್ಯಪ್ರದೇಶದಲ್ಲಿ ಶೇ. 70 ಹಾಗೂ ತೆಲಂಗಾಣದಲ್ಲಿ ಶೇ. 65 ರಷ್ಟು ಮಳೆಯಾಗಿದೆ.
ಪರಿಣಾಮ, ಬೆಳೆಗೆ ಭಾರಿ ನಷ್ಟ ಉಂಟಾಗಿದೆ. ಮಹಾರಾಷ್ಟ್ರದಲ್ಲಿ ಭಾರಿ ಮಳೆ ಪರಿಣಾಮ ರೈತರು ವಿವಿಧೆಡೆ ಎರಡು ಬಾರಿ ಈರುಳ್ಳಿ ಬಿತ್ತನೆ ಮಾಡಬೇಕಾಯಿತು. ಬೆಳೆಗಳು ಉಳಿದರೂ ತಡವಾಗಿ ಬಿತ್ತಿದ ಕೆಲ ಪ್ರದೇಶಗಳಲ್ಲಿ ಇಳುವರಿ ದೊರೆಯಲಿಲ್ಲ. ಸಾಮಾನ್ಯವಾಗಿ, ಅಕ್ಟೋಬರ್ ಮೊದಲ ವಾರದಿಂದ ಮಾರುಕಟ್ಟೆಯಲ್ಲಿರಬೇಕಿದ್ದ ಈರುಳ್ಳಿ ಇನ್ನೂ ರೈತರ ಜಮೀನುಗಳಲ್ಲೇ ಉಳಿದಿದೆ. ಅದೇ ಸಮಯದಲ್ಲಿ, ಈರುಳ್ಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿ ಬೆಲೆಗಳಲ್ಲಿ ಏರಿಕೆಯಾಯಿತು.
ಸರ್ಕಾರದ ಪಾತ್ರವೇನು?
ನವೆಂಬರ್ ಮೊದಲ ವಾರದವರೆಗೆ ನಮ್ಮ ದೇಶ ರೂ. 3,467 ಕೋಟಿಯಷ್ಟು ಈರುಳ್ಳಿ ರಫ್ತು ಮಾಡಿದೆ. ಈಗ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು ಜನರ ಅಗತ್ಯಗಳನ್ನು ಪೂರೈಸಲು ಮತ್ತು ಬೆಲೆ ಏರಿಕೆ ನಿಯಂತ್ರಿಸಲು ಕೇಂದ್ರ ಸರ್ಕಾರ ಜನವರಿಯವರೆಗೆ ರಫ್ತು ನಿಷೇಧಿಸಿದೆ.