ಕೋಲ್ಕತ್ತಾ: ಕೊರೊನಾ ಸೋಂಕಿಗೆ ಪಶ್ಚಿಮ ಬಂಗಾಳದ ಉಪ ಜಿಲ್ಲಾಧಿಕಾರಿ ಪ್ರಾಣ ಕಳೆದುಕೊಂಡಿದ್ದಾರೆ.
ಹೂಗ್ಲಿ ಜಿಲ್ಲೆಯಲ್ಲಿ ಡೆಪ್ಯೂಟಿ ಕಲೆಕ್ಟರ್ ಹಾಗು ಡೆಪ್ಯೂಟಿ ಮ್ಯಾಜಿಸ್ಟ್ರೇಟ್ ಆಗಿ ಸೇವೆ ಸಲ್ಲಿಸುತ್ತಿದ್ದ ದೇಬದತ್ತ ರಾಯ್ ಸಾವನ್ನಪ್ಪಿದ್ದಾರೆ. ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಕೊರೊನಾ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಕಾಣಿಸಿಕೊಂಡಿತು. ಸೆರಾಂಪೋರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇವರು ಕೊನೆಯುಸಿರೆಳೆದಿದ್ದಾರೆ.
2010ರ ಬ್ಯಾಚ್ನ IAS ಅಧಿಕಾರಿಯಾಗಿದ್ದ ಇವರು ಹೂಗ್ಲಿ ಜಿಲ್ಲೆಯಲ್ಲಿ ವಲಸೆ ಕಾರ್ಮಿಕರಿಗೆ ಸೌಲಭ್ಯ ಒದಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ಅವರು ಕೊರೊನಾ ವಾರಿಯರ್ ಎಂದು ಗುರುತಿಸಿಕೊಂಡು, ಜನಸಾಮಾನ್ಯರ ಮೆಚ್ಚುಗೆ ಗಳಿಸಿದ್ದರು.
ಪತಿಗೂ ತಗುಲಿದ ಸೋಂಕು:
ಇವರ ಪತಿಗೂ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಇವರಿಗೆ 4 ವರ್ಷದ ಮಗುವಿದೆ ಎಂದು ತಿಳಿದು ಬಂದಿದೆ.
ನಾಲ್ಕು ವರ್ಷದ ಮಗುವಿನ ಜೊತೆ ದೇಬದತ್ತ ರಾಯ್ ಸಿಎಂ ಮಮತಾ ಸಂತಾಪ:
ಜಿಲ್ಲಾಧಿಕಾರಿ ಸಾವನ್ನಪ್ಪಿರುವುದಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದು, ದೇಬದತ್ತ ರಾಯ್ ಅವರು ಚಂದನ್ ನಗರದಲ್ಲಿ ಡೆಪ್ಯೂಟಿ ಮ್ಯಾಜಿಸ್ಟ್ರೇಟ್ ಮತ್ತು ಡೆಪ್ಯೂಟಿ ಜಿಲ್ಲಾಧಿಕಾರಿಯಾಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಪಶ್ಚಿಮ ಬಂಗಾಲದ ನಾಗರಿಕ ಸೇವೆಯಲ್ಲಿದ್ದ ಯುವ ಅಧಿಕಾರಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಂಡಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.
ಈ ಕುರಿತಾಗಿ ದೇಬದತ್ತ ರಾಯ್ ಪತಿ ಜೊತೆ ದೂರವಾಣಿ ಮೂಲಕ ಮಾತನಾಡಿದ್ದ ಸಿಎಂ, ಸಾವಿನ ನೋವು ತುಂಬುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಧೈರ್ಯ ತುಂಬಿದ್ದಾರೆ.