ಕೋಲ್ಕತ್ತಾ: ಇತ್ತ ನವದೆಹಲಿಯಲ್ಲಿ ಬಿಜೆಪಿ ಸರ್ಕಾರದ ಪದಗ್ರಹಣ ಸಮಾರಂಭ ನಡೆಯುತ್ತಿದರೆ, ಅತ್ತ ಪಶ್ಚಿಮ ಬಂಗಾಳದಲ್ಲಿ ಸಿಎಂ ಮಮತಾ ಬ್ಯಾನರ್ಜಿ, ಐ ಹೇಟ್ ಬಿಜೆಪಿ ಎಂದು ಜರಿದಿದ್ದಾರೆ.
ದೀದಿ ಹೀಗೆನ್ನಲು ಕಾರಣವಾಗಿದ್ದು, ಕೆಲ ಮಂದಿ ದೀದಿ ಕಾರು ಅಡ್ಡಗಟ್ಟಿ, ಜೈ ಶ್ರೀ ರಾಮ್ ಎಂಬ ಘೋಷಣೆ ಕೂಗಿದರು. ಇದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಇವರೆಲ್ಲ ಬಂಗಾಳದವರಲ್ಲ, ಹೊರಗಿನ ಬೆಜೆಪಿಗರು, ಕ್ರಿಮಿನಲ್ಗಳು ಎಂದು ದೀದಿ ರೇಗಾಡಿದ್ದರು.
ಆನಂತರ ಕೋಲ್ಕತ್ತಾದ ನೈಹಾಥಿ ಮುನ್ಸಿಪಾಲಿಟಿ ಎದುರು ಧರಣಿ ಕೂತ ಬ್ಯಾನರ್ಜಿ, ಚುನಾವಣೆ ವೇಳೆ ಹಿಂಸಾಚಾರ ನಡೆಸಿದ ಬಿಜೆಪಿ ವಿರುದ್ಧ ಪ್ರತೀಕಾರ ತೀರಿಸಿಕೊಳ್ತೇನೆ ಎಂದರು.
ನಾನು ಬಿಜೆಪಿಯನ್ನು ವಿರೋಧಿಸುತ್ತೇನೆ. ಕೆಲವು ಗೂಂಡಾಗಳು ನೀತಿ ಸಂಹಿತೆಯೆ ಲಾಭ ಪಡೆದರು. ಆದರೆ, ನಾನು ಇದ್ಯಾವುದಕ್ಕೂ ಹೆದರುವುದಿಲ್ಲ. ನಾನು ಮೋದಿ ಅಥವಾ ಕೇಂದ್ರ ಸರ್ಕಾರದ ಋಣದಲ್ಲಿ ಬದುಕುತ್ತಿಲ್ಲ ಎಂದು ಗುಡುಗಿದರು.
ನಾನಿಲ್ಲಿಗೆ ಬರುವಾಗ ಕೆಲವರು ನನ್ನ ಮೇಲೆ ದಾಳಿಗೆ ಮುಂದಾದರು. ನಾನು ಇಂತಹವುಗಳ ವಿರುದ್ಧ ಹೋರಾಡಿದ್ದೇನೆ. ಬುಲೆಟ್ಗೆ ಬಗ್ಗದೆ ನಿಂತಿದ್ದೇನೆ. ಇದ್ಯಾವುದನ್ನೂ ಮರೆತಿಲ್ಲ. ಇಂದು ನನ್ನನ್ನು ಯಾರು ನಿಂದಿಸಿದರೋ ಅವರನ್ನು ಬಂಧಿಸಬಹುದಿತ್ತು. ಆದರೆ, ಹಾಗೆ ಮಾಡಲ್ಲ. ಅವರಿಗೆ ಕಾನೂನು ಪಾಠ ಕಲಿಸುತ್ತೆ. ನನ್ನ ಘೋಷಣೆ ಜೈ ಹಿಂದ್. ಅವರು ಬಲವಂತ ಮಾಡಿದರೆ ನನ್ನ ಘೋಷಣೆ ಬದಲಾಗಲ್ಲ ಎಂದರು.
ಪ್ರಧಾನಿ ಮೋದಿ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಹೊರಟಿದ್ದಾರೆ. ನನ್ನ ಸರ್ಕಾರವನ್ನು ಅಲುಗಾಡಿಸಲು ಬಂದರೆ, ನನ್ನಗಿಂತ ಶತ್ರು ಮತ್ತೊಬ್ಬಳಿರುವುದಿಲ್ಲ ಎಂದು ಅಬ್ಬರಿಸಿದ್ದಾರೆ.