ಸೈಬರ್ ಕ್ರೈಂ ಎಂಬುದು ಇವತ್ತು ಜಾಗತಿಕ ಪಿಡುಗಾಗಿ ಹರಡುತ್ತಿದ್ದು, ಪ್ರತಿಯೊಂದು ದೇಶದ ನಾಯಕನೂ ತನ್ನ ದೇಶವನ್ನು ಈ ಪಿಡುಗಿನಿಂದ ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಲೇಬೇಕಿದೆ. ರಾಷ್ಟ್ರದ ಜನತೆಯ ವಿಷಯವಾಗಿರಲಿ ಅಥವಾ ಕಾರ್ಪೊರೇಟ್ ವ್ಯವಹಾರವಾಗಿರಲಿ ಎಲ್ಲದಕ್ಕೂ ಈ ಸೈಬರ್ ಕ್ರೈಂನ ಭಯ ಇದ್ದೇ ಇದೆ. ವಿಶ್ವ ಆರ್ಥಿಕ ವೇದಿಕೆಯ ಗ್ಲೋಬಲ್ ರಿಸ್ಕ್ ರಿಪೋರ್ಟ್-2020 ರ ವರದಿಯ ಪ್ರಕಾರ, ಮುಂದಿನ 10 ವರ್ಷಗಳಲ್ಲಿ ವಿಶ್ವದ ವ್ಯಾಪಾರ, ಉದ್ದಿಮೆಗಳಿಗೆ ಸೈಬರ್ ಕ್ರೈಂ ಎರಡನೇ ಅತಿ ಹೆಚ್ಚು ಪ್ರಮಾಣದ ಅಪಾಯವನ್ನು ತರಲಿದೆ ಎಂದು ಹೇಳಲಾಗಿದೆ.
ಯಾವುದೋ ಒಂದು ದೇಶ ಪ್ರಾಯೋಜಿತ ಸೈಬರ್ ಕ್ರೈಂ ಚಟುವಟಿಕೆಗಳು ವಿಶ್ವದ ನೆಮ್ಮದಿ ಕೆಡಿಸಲಿದ್ದು, ಇಂಟರ್ನೆಟ್ ಮೂಲಕ ಸೈಬರ್ ಕ್ರಿಮಿನಲ್ಗಳು ನಡೆಸುವ ಸೈಬರ್ ಕ್ರೈಂ ಚಟುವಟಿಕೆಗಳ ಪಾಲು ಇದರಲ್ಲಿ ಶೇ 80 ರಷ್ಟಿರಲಿದೆ. ಹೀಗಾಗಿ ಸೈಬರ್ ಕ್ರೈಂ ಗಳಿಗೆ ಕಡಿವಾಣ ಹಾಕುವುದು ಈಗ ಎಂದಿಗಿಂತಲೂ ಹೆಚ್ಚು ಅಗತ್ಯವಾಗಿದೆ.
ಸೈಬರ್ ಕ್ರೈಂ - ಜಾಗತಿಕ ಸವಾಲು
ಪ್ರಸ್ತುತ ಜಗತ್ತಿನಲ್ಲಿ 4.66 ಬಿಲಿಯನ್ ಜನತೆ ಇಂಟರ್ನೆಟ್ ಬಳಸುತ್ತಾರೆ. ಇಂಟರ್ನೆಟ್ ಎಲ್ಲರಿಗೂ ಸುಲಭವಾಗಿ ಸಿಗುವಂತಾಗಿರುವುದು ಹಾಗೂ ಇಂಟರ್ನೆಟ್ ಬಳಕೆಯ ದರಗಳು ಕಡಿಮೆಯಾಗಿದ್ದರಿಂದ ಕಳೆದ 12 ವರ್ಷಗಳಲ್ಲಿ ನೆಟ್ ಬಳಕೆದಾರರ ಸಂಖ್ಯೆ ಮೂರು ಪಟ್ಟು ಹೆಚ್ಚಳವಾಗಿದೆ. ಈ ಮಧ್ಯೆ ಕಂಪ್ಯೂಟರ್ ಹಾಗೂ ತಂತ್ರಜ್ಞಾನಗಳ ಅವಲಂಬನೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ವ್ಯವಹಾರ ನಡೆಸುವ ಮೂಲ ಸ್ವರೂಪವೇ ಬದಲಾಗುತ್ತಿದೆ. ಇತರರೊಂದಿಗೆ ಸಂವಹನ ನಡೆಸುವುದು, ಸಾಮಾಜಿಕ ಕಾರ್ಯಗಳಲ್ಲಿ ತೊಡಗುವುದು, ಹೊಸತನ್ನು ಕಲಿಯುವುದು ಹೀಗೆ ಪ್ರತಿಯೊಂದಕ್ಕೂ ಇವತ್ತು ಇಂಟರ್ನೆಟ್ ಅನ್ನು ಅವಲಂಬಿಸಿದ್ದೇವೆ.
ಆದರೆ ನಾವು ಇಂಟರ್ನೆಟ್ ಮೇಲೆ ಎಷ್ಟು ಹೆಚ್ಚು ಹೆಚ್ಚಾಗಿ ಅವಲಂಬಿತವಾಗುತ್ತಿರುವೆಯೋ ಅಷ್ಟೇ ಪ್ರಮಾಣದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಇಂಟರ್ನೆಟ್ ಹಾಗೂ ಅದರ ಮೇಲೆ ಅವಲಂಬಿತವಾಗಿರುವ ಬಳಕೆದಾರರು, ಅವರ ಮಾಹಿತಿ, ಉಪಕರಣಗಳು, ಮೂಲಭೂತ ಸೌಕರ್ಯಗಳು ಇವೆಲ್ಲವನ್ನೂ ಸೈಬರ್ ಕ್ರಿಮಿನಲ್ಗಳ ದಾಳಿಯಿಂದ ರಕ್ಷಿಸಲು ಬೇಕಾದಷ್ಟು ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದರಲ್ಲಿ ನಾವು ಹಿಂದೆ ಬಿದ್ದಿದ್ದೇವೆ ಎಂಬುದು ಸತ್ಯ.
ಪ್ರತಿ ವರ್ಷ ವಿಶ್ವಾದ್ಯಂತ ಸೈಬರ್ ಕ್ರಿಮಿನಲ್ಗಳು ಸರ್ಕಾರಗಳು, ಕಂಪನಿಗಳು ಮತ್ತು ಖಾಸಗಿ ವ್ಯಕ್ತಿಗಳ ಸುಮಾರು 600 ಬಿಲಿಯನ್ ಡಾಲರ್ಗಳಷ್ಟು ಸಂಪತ್ತನ್ನು ಕೊಳ್ಳೆ ಹೊಡೆಯುತ್ತಾರೆ. 2019 ರಿಂದ 2023 ರ ಅವಧಿಯಲ್ಲಿ ಕಂಪನಿಗಳಿಗೆ ಸೈಬರ್ ಅಪರಾಧದಿಂದ ಸಂಭವಿಸಬಹುದಾದ ನಷ್ಟ 5.2 ಟ್ರಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಕೇವಲ ಆರ್ಥಿಕ ಹಾನಿ ಮಾತ್ರವಲ್ಲದೆ ವ್ಯಕ್ತಿಯ ಸಾಮಾಜಿಕ ಹಾಗೂ ನೈತಿಕ ಮೌಲ್ಯಗಳನ್ನೂ ಹಾಳು ಮಾಡುವ ಸಾಮರ್ಥ್ಯ ಸೈಬರ್ ಅಪರಾಧಕ್ಕೆ ಇದೆ.
ಸೈಬರ್ ಕ್ರೈಂ ತಡೆಗೆ ಜಾಗತಿಕ ಮಟ್ಟದಲ್ಲಿಆಗಬೇಕಿರುವುದೇನು?
ಜಾಗತಿಕವಾಗಿ ಸೈಬರ್ ಕ್ರೈಂ ಮಟ್ಟ ಹಾಕಲು ಎಲ್ಲ ದೇಶಗಳು ಒಂದಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ. ಆದರೆ ಇದನ್ನು ಒಗ್ಗಟ್ಟಾಗಿ ಸಾಧಿಸಲು ಈ ಕೆಳಗಿನ ಕ್ರಮಗಳನ್ನು ಅನುಸರಿಸುವುದು ಸೂಕ್ತ ಎಂದು ವರದಿಯಲ್ಲಿ ತಿಳಿಸಲಾಗಿದೆ.