ನವದೆಹಲಿ:ಕೇಂದ್ರ ಸರ್ಕಾರ ಜಾರಿಗೊಳಿಸಲು ನಿರ್ಧರಿಸಿರುವ ನೂತನ ಕೃಷಿ ಕಾನೂನುಗಳಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಕಾನೂನುಗಳಲ್ಲಿರುವ ವಿವಾದ ಬಗೆಹರಿಸಲು ಸಮಿತಿ ರಚನೆ ಮಾಡಿ ಮಹತ್ವದ ಆದೇಶ ಹೊರಹಾಕಿದೆ.
ಸುಪ್ರೀಂ ಕೋರ್ಟ್ನಿಂದ ರಚನೆಯಾಗುತ್ತಿರುವ ಸಮಿತಿ ಸರ್ಕಾರದ ಪರವಾಗಿದ್ದು, ಇಲ್ಲಿ ನಮಗೆ ನ್ಯಾಯ ಸಿಗುವುದಿಲ್ಲ ಎಂದು ರೈತಪರ ಸಂಘಟನೆಗಳು ಹೇಳಿವೆ. ಕಾನೂನಿನಲ್ಲಿರುವ ಸಮಸ್ಯೆ ಬಗೆಹರಿಸುವಂತೆ ನಾವು ಸುಪ್ರೀಂ ಕೋರ್ಟ್ ಬಳಿ ಮನವಿ ಮಾಡಿಲ್ಲ. ಈ ಬೆಳವಣಿಗೆ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದೆ ಎಂದು ಆರೋಪಿಸಿವೆ.
ಓದಿ: ಕೇಂದ್ರದ ಮೂರು ಕೃಷಿ ಕಾನೂನುಗಳಿಗೆ ತಡೆಯಾಜ್ಞೆ ನೀಡಿದ ಸುಪ್ರೀಂಕೋರ್ಟ್
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ರೈತ ಸಂಘಟನೆ ಮುಖಂಡ ಬಲ್ಬೀರ್ ಸಿಂಗ್ ರಾಜೇವಾಲ್, ಸುಪ್ರೀಂ ಕೋರ್ಟ್ ನೇಮಕ ಮಾಡಿದ ಸಮಿತಿ ಸದಸ್ಯರು ವಿಶ್ವಾಸಾರ್ಹವಲ್ಲ. ರೈತರ ಪ್ರತಿಭಟನೆ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ. ನಾವು ಸಮಿತಿಯ ಮೂಲ ತತ್ವಗಳಿಗೆ ವಿರುದ್ಧವಾಗಿದ್ದು, ಯಾವುದೇ ಸಮಿತಿ ಮುಂದೆ ನಾವು ಹಾಜರಾಗುವುದಿಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಕಳೆದ 48 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸಮಸ್ಯೆ ಇತ್ಯರ್ಥ ಪಡಿಸಲು ಸಮಿತಿ ರಚನೆ ಮಾಡಲಾಗುತ್ತಿದ್ದು, ಅದರಲ್ಲಿನ ಸಮಸ್ಯೆಗಳ ಬಗ್ಗೆ ಈ ಸಮಿತಿ ಚರ್ಚೆ ನಡೆಸಲಿದೆ ಎಂದಿದೆ.