ಮಧ್ಯಪ್ರದೇಶ:ಒಂದೇ ದಿನ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ನ 22 ಶಾಸಕರು ರಾಜೀನಾಮೆ ನೀಡಿ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ತಂದಿಟ್ಟಿದ್ದರೆ, ಇತ್ತ ರಾಜ್ಯದ ಕಾಂಗ್ರೆಸ್ ನಾಯಕರು ನಮ್ಮ ಬಳಿ ಬಹುಮತವಿದೆ, ಸರ್ಕಾರ ಬೀಳುವ ಯಾವುದೇ ಭಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಮಲನಾಥ್ ಸರ್ಕಾರಕ್ಕೆ ಅಪಾಯವಿಲ್ಲ, ಕೈ ನಾಯಕರಿಗೆ ಬಹುಮತ ಸಾಬೀತು ಪಡಿಸುವ ವಿಶ್ವಾಸ.. - ಮಧ್ಯಪ್ರದೇಶ ಕಾಂಗ್ರೆಸ್ ನಾಯಕರ ವಿಶ್ವಾಸ
ಎಲ್ಲಾ ಶಾಸಕರು ಸಿಎಂ ಕಮಲ್ನಾಥ್ ಜತೆಗೆ ಸಂಪರ್ಕದಲ್ಲಿದ್ದಾರೆ. ನಮ್ಮ ಬಳಿ ಬಹುಮತವಿದೆ. ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತು ಪಡಿಸುತ್ತೇವೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜೀನಾಮೆ ಪರ್ವ ಮುಂದುವರೆಯುತ್ತಿದ್ದಂತೆಯೇ ಕಾಂಗ್ರೆಸ್ ಸಭೆ ನಡೆಸಿದೆ. ಸಭೆ ಬಳಿಕ ಪ್ರತಿಕ್ರಿಯೆ ನೀಡಿರುವ ರಾಜ್ಯ ಕಾಂಗ್ರೆಸ್ ವಕ್ತಾರೆ ಶೋಭಾ ಓಜಾ, ಸಭೆಯಲ್ಲಿ ಪಕ್ಷೇತರ ಶಾಸಕರು ಸೇರಿದಂತೆ ಎಲ್ಲಾ ಕಾಂಗ್ರೆಸ್ ಶಾಸಕರು ಉಪಸ್ಥಿತರಿದ್ದರು. ಜ್ಯೋತಿರಾದಿತ್ಯ ಸಿಂಧಿಯಾಗೆ ರಾಜ್ಯಸಭಾ ಸ್ಥಾನ ಬೇಕೆಂಬ ಕೋರಿಕೆಯ ಮೇಲೆ 22 ಶಾಸಕರು ರಾಜೀನಾಮೆ ನೀಡಿದ್ದಾರೆ. ಆದರೆ, ಇದೀಗ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿಗೆ ಸೇರ್ಪಡೆಯಾಗಲು ಹೊರಟಿರುವುದಕ್ಕೆ ಇವರೆಲ್ಲ ಕೋಪಗೊಂಡಿದ್ದಾರೆ. ಎಲ್ಲಾ ಶಾಸಕರು ಸಿಎಂ ಕಮಲ್ನಾಥ್ ಜತೆಗೆ ಸಂಪರ್ಕದಲ್ಲಿದ್ದಾರೆ. ನಮ್ಮ ಬಳಿ ಬಹುಮತವಿದೆ. ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುತ್ತೇವೆ ಎಂದು ಹೇಳಿದ್ದಾರೆ.
ನಮ್ಮ ಬಳಿ 94 ಶಾಸಕರಿದ್ದಾರೆ. ಅಗತ್ಯ ಬಿದ್ದರೆ ಎಲ್ಲರೂ ಒಂದಾಗಿ ಹೋರಾಡುತ್ತೇವೆ. ಪಕ್ಷದ ನೈತಿಕತೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ರಾಜ್ಯದ ಕಾಂಗ್ರೆಸ್ ನಾಯಕ ಲಕ್ಷ್ಮಣ್ ಸಿಂಗ್ ತಿಳಿಸಿದ್ದಾರೆ.