ನವದೆಹಲಿ:ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಒಂದಿಂಚೂ ಹಿಂದೆ ಸರಿಯುವುದಿಲ್ಲ. ಭಾರತೀಯ ಗಡಿ ಪ್ರದೇಶಗಳನ್ನು ಉಲ್ಲಂಘಿಸುವ ಯಾವುದೇ ಪ್ರಯತ್ನಗಳ ವಿರುದ್ಧ ದಿಟ್ಟ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅಮಿತ್ ಶಾ ಪಾಕ್ ವಿರುದ್ಧ ಗುಡುಗಿದ್ದಾರೆ.
ರಾಷ್ಟ್ರೀಯ ಭದ್ರತೆಯಲ್ಲಿ ಒಂದಿಂಚೂ ರಾಜಿಯಿಲ್ಲ, ಸೈನಿಕರ ರಕ್ತ ವ್ಯರ್ಥವಾಗದು: ಪಾಕ್‌ಗೆ ಶಾ ಎಚ್ಚರಿಕೆ - ಆರ್ಟಿಕಲ್ 375
ಕಳೆದೊಂದು ವರ್ಷದಲ್ಲಿ ಪಾಕಿಸ್ತಾನ ಸೇನೆ 2,050 ಬಾರಿ ಕದನ ವಿರಾಮ ಉಲ್ಲಂಘಿಸಿದ್ದು, 21 ಭಾರತೀಯರು ಜೀವ ಕಳೆದುಕೊಂಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಕೆಲ ದಿನಗಳ ಹಿಂದೆ ತಿಳಿಸಿತ್ತು. ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿ ಪಾಕ್ ಅಪ್ರಚೋದಿತ ದಾಳಿ ಸಾಮಾನ್ಯ ಎನ್ನುವಂತಿದೆ. ಈ ಬಗ್ಗೆ ಮಾತನಾಡಿದ ಗೃಹ ಸಚಿವ ಅಮಿತ್ ಶಾ ಪಾಕ್‌ಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಗಡಿ ರೇಖೆ ಉಲ್ಲಂಘಿಸುವವರ ವಿರುದ್ಧ ಪ್ರಧಾನಿ ಮೋದಿ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲು ಸಿದ್ಧವಿದೆ. ಭದ್ರತೆಯ ವಿಚಾರದಲ್ಲಿ ನಾವೆಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ನಮ್ಮ ಪ್ರದೇಶವನ್ನು ಒಂದಿಂಚೂ ಉಲ್ಲಂಘಿಸಿದ್ರೂ ಸಹಿಸಲಾರೆವು. ನಮ್ಮ ಸೈನಿಕರ ಒಂದು ಹನಿ ರಕ್ತವೂ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಖಾರವಾಗಿಯೇ ಹೇಳಿದ್ದಾರೆ.
ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಭಾರತದ ಒಕ್ಕೂಟದ ಆಶಯವನ್ನು ಸಾಕಾರಗೊಳಿಸಿದ್ದೇವೆ. ಆಗಸ್ಟ್ 5ರಂದು ಅನುಚ್ಚೇದ 370 ಮತ್ತು 35ಎ ರದ್ದುಗೊಂಡ ಬಳಿಕ ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಶಾಂತವಾಗಿದೆ ಎಂದು ತಿಳಿಸಿದ್ರು.