ಮುಂಬೈ:ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯುವುದಕ್ಕೂ ಮುಂಚಿತವಾಗಿ ಬಿಜೆಪಿ-ಶಿವಸೇನೆ ನಡುವೆ 50:50 ಸೂತ್ರದ ಒಪ್ಪಂದವಾಗಿದ್ದು, ಇದೀಗ ಫಲಿತಾಂಶ ಹೊರಬಂದಿದ್ದು ಎರಡು ಪಕ್ಷ ಮುಖ್ಯಮಂತ್ರಿ ಕುರ್ಚಿಗಾಗಿ ಫೈಟ್ ನಡೆಸುತ್ತಿವೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಬಿಜೆಪಿ 50:50 ಸೂತ್ರಕ್ಕೆ ಒಪ್ಪಿಗೆ ನೀಡಿದ್ರೆ ಮಾತ್ರ ಅವರೊಂದಿಗೆ ನಾವು ಸರ್ಕಾರ ರಚನೆ ಮಾಡಲಿದ್ದೇವೆ ಎಂದು ಖಡಕ್ ಆಗಿ ಹೇಳಿದ್ದಾರೆ.
ಒಂದು ವೇಳೆ, ಈಗಲೇ ಸರ್ಕಾರ ರಚನೆಯಾದರೆ ಮೊದಲ 2.5 ವರ್ಷ ಶಿವಸೇನೆ ಅಭ್ಯರ್ಥಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟು ತದನಂತರದ 2.5 ವರ್ಷ ಬಿಜೆಪಿ ಅಭ್ಯರ್ಥಿ ಸಿಎಂ ಆಗುವುದು. ಜತೆಗೆ ಸಂಪುಟದಲ್ಲಿ ಶೇ.50ರಷ್ಟು ಸಚಿವ ಸ್ಥಾನ ತಮಗೆ ಬಿಟ್ಟು ಕೊಡುವುದು ಎಂಬುದು ಇವರ ಕಂಡಿಷನ್ ಆಗಿದೆ. ಇದೇ ಪ್ಲಾನ್ ಇಟ್ಟುಕೊಂಡು ಶಿವಸೇನೆ ತಮ್ಮ ಕುಟುಂಬದ ಆದಿತ್ಯ ಠಾಕ್ರೆಗೆ ವರ್ಲಿ ಕ್ಷೇತ್ರದಿಂದ ಗೆಲ್ಲಿಸಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಶಿವಸೇನೆ ಎಂಎಲ್ಎ ಪ್ರಕಾಶ್, ಆದಿತ್ಯ ಠಾಕ್ರೆ ಮುಂದಿನ ಮುಖ್ಯಮಂತ್ರಿಯಾಗಲಿ ಎಂಬುದು ನಮ್ಮ ಮೊದಲ ಬೇಡಿಕೆ. ಚುನಾವಣೆ ನಡೆಯುವುದಕ್ಕೂ ಮುಂಚಿತವಾಗಿ ಬಿಜೆಪಿ-ಶಿವಸೇನೆ 50:50 ಸೂತ್ರದ ಅಧಿಕಾರ ಹಂಚಿಕೆ ಒಪ್ಪಂದ ಮಾಡಿಕೊಡಿವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್+ಎನ್ಸಿಪಿ ಜತೆ ಮೈತ್ರಿ!?
288 ಕ್ಷೇತ್ರ ಹೊಂದಿರುವ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ 104, ಶಿವಸೇನೆ 56, ಎನ್ಸಿಪಿ 54 ಹಾಗೂ ಕಾಂಗ್ರೆಸ್ 43 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ. ಮಹಾರಾಷ್ಟ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು 145 ಮ್ಯಾಜಿಕ್ ನಂಬರ್ ಆಗಿದೆ ಇದೀಗ ಬಿಜೆಪಿ-ಶಿವಸೇನೆ ಸೇರಿಕೊಂಡರೆ 160 ಆಗುವುದರಿಂದ ಸುಲಭವಾಗಿ ಸರ್ಕಾರ ರಚನೆ ಮಾಡಬಹುದು. ಆದರೆ ಎರಡು ಪಕ್ಷ ಮುಖ್ಯಮಂತ್ರಿ ಸ್ಥಾನಕ್ಕಾಗಿ ಮುಗಿಬಿದ್ದಿರುವ ಕಾರಣ, ಒಂದು ವೇಳೆ ಶಿವಸೇನೆ ಈಗಾಗಲೇ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿರುವ ಕಾಂಗ್ರೆಸ್ + ಎನ್ಸಿಪಿ ಜತೆ ಸೇರಿಕೊಂಡು ಸರ್ಕಾರ ರಚನೆ ಮಾಡಿದ್ರೂ ಮಾಡಬಹುದು ಎಂಬ ಮಾತು ಕೇಳಿ ಬರುತ್ತಿವೆ. ಈ ಮೂರು ಪಕ್ಷ ಒಟ್ಟಿಗೆ ಸೇರಿದಾಗ 153 ಆಗಲಿದ್ದು ಈ ವೇಳೆ ಸಹ ಸರ್ಕಾರ ರಚನೆ ಮಾಡಬಹುದಾಗಿದೆ. ಆದರೆ ಕಾಂಗ್ರೆಸ್+ಎನ್ಸಿಪಿ ಪಕ್ಷ ಶಿವಸೇನೆಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಲು ಒಪ್ಪಿಕೊಂಡರೆ ಮಾತ್ರ ಈ ಮೈತ್ರಿ ಸಾಧ್ಯ.