ನವದೆಹಲಿ: ನಾವು ಕೊರೊನಾ ವೈರಸ್ ಅನ್ನು ಸೃಷ್ಟಿಸಲೂ ಇಲ್ಲ, ಉದ್ದೇಶಪೂರ್ವಕವಾಗಿ ಹರಡಿಸಲೂ ಇಲ್ಲ ಎಂದು ಭಾರತದಲ್ಲಿರುವ ಚೀನಾ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ. ರಾಯಭಾರ ಕಚೇರಿಯ ವಕ್ತಾರಾಗಿರುವ ಜಿ ರೊಂಗ್ ಕೊರೊನಾ ವೈರಸ್ ಅನ್ನು 'ಚೀನಾ ವೈರಸ್' ಹಾಗೂ ವುಹಾನ್ ವೈರಸ್ ಎಂದು ಕರೆಯುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೆಲವು ಗಂಭೀರ ಆರೋಪಗಳ ಕುರಿತು ಮಾತನಾಡಿದ ಜಿ ರೊಂಗ್ ಅಂತಾರಾಷ್ಟ್ರೀಯ ಸಮುದಾಯ ಕೊರೊನಾ ಮಹಾಮಾರಿಯನ್ನು ಚೀನಾ ಹೇಗೆ ನಿಭಾಯಿಸುತ್ತಿದೆ ಎಂಬುದನ್ನು ಮಾತ್ರ ಅರ್ಥ ಮಾಡಿಕೊಳ್ಳಬೇಕು. ಅದಕ್ಕೆ ಬದಲಿಗೆ ಚೀನಾವನ್ನು ಪೂರ್ವಾಗ್ರಹಗಳಿಂದ ನೋಡಬಾರದು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಆ ಋಣ ತೀರಿಸಲು ಕೊರೊನಾ ವಿರುದ್ಧ ಹೋರಾಟದಲ್ಲಿ ಭಾರತಕ್ಕೆ ಸಹಾಯ ಮಾಡಲು ಸಿದ್ಧ ಎಂದ ಚೀನಾ
ಕೊರೊನಾ ತಡೆಯುವಲ್ಲಿ ಭಾರತ ಹಾಗೂ ಚೀನಾದ ಪರಸ್ಪರ ಸಹಕಾರವನ್ನು ಉಲ್ಲೇಖಿಸುತ್ತಾ ಮಾತನಾಡಿದ ಅವರು ಭಾರತದ ಸಹಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ವಿಶ್ವ ಆರೋಗ್ಯ ಸಂಘಟನೆಯು ನಮ್ಮ ದೇಶದೊಂದಿಗೆ ಕೊರೊನಾವನ್ನು ವೈರಸ್ನನ್ನು ಲಿಂಕ್ ಮಾಡುತ್ತಿದೆ ಎಂದು ಚೀನಾ ಆರೋಪಿಸಿದೆ. ಜೊತೆಗೆ ಚೀನಾ ಕೊರೊನಾ ತಡೆಯಲು ಮಾಡುತ್ತಿರುವ ಪ್ರಯತ್ನಕ್ಕೆ ಕಳಂಕ ತರುವುದಕ್ಕೆ ವಿಶ್ವ ಆರೋಗ್ಯ ಸಂಘಟನೆ ಯತ್ನಿಸುತ್ತಿದೆ. ಚೀನಿಯರು ಮಾನವಕುಲದ ರಕ್ಷಣೆಗೆ ಅಪಾರ ತ್ಯಾಗ ಮಾಡಿದ್ದಾರೆ ಎಂದು ಜಿ ರೊಂಗ್ ಅಭಿಪ್ರಾಯಪಟ್ಟಿದ್ದಾರೆ.
ವುಹಾನ್ನಲ್ಲಿ ಮೊದಲ ಪ್ರಕರಣ ಕಂಡು ಬಂದಿದ್ದು ನಿಜ ಆದರೆ ಕೊರೊನಾ ವೈರಸ್ ಚೀನಾದಲ್ಲಿ ಸೃಷ್ಟಿಯಾಗಿದ್ದು ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದು ಈ ವೇಳೆ ಸ್ಪಷ್ಟಪಡಿಸಿದ್ದಾರೆ. ಇದಕ್ಕೂ ಮೊದಲು ಅಮೆರಿಕಾದ ಸೆಕ್ರೆಟರಿ ಆಫ್ ಸ್ಟೇಟ್ಸ್ ಮೈಕ್ ಪ್ಯಾಂಪಿಯೋ ಕೊರೊನಾ ವೈರಸ್ ಅನ್ನು ವುಹಾನ್ ವೈರಸ್ ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ಚೀನಾ ಭಾರೀ ಆಕ್ಷೇಪ ವ್ಯಕ್ತಪಡಿಸಿತ್ತು.