ನವದೆಹಲಿ:ಪೂರ್ವ ಲಡಾಖ್‌ನ ಗಡಿ ನಿಯಂತ್ರಣ ರೇಖೆ ಉದ್ದಕ್ಕೂ ಚೀನಾದಿಂದ ಉಂಟಾಗುವ ಯಾವುದೇ ಬೆದರಿಕೆ ನಿಭಾಯಿಸಲು ಭಾರತ ಸಂಪೂರ್ಣವಾಗಿ ಸಮರ್ಥವಾಗಿದೆ. ನಮ್ಮ ವಾಯು ಶಕ್ತಿ ಎದುರು ಚೀನಾ ಬಲಿಷ್ಠವಾಗಿಲ್ಲ ಎಂದು ಭಾರತೀಯ ವಾಯುಪಡೆಯ(ಐಎಎಫ್) ಮುಖ್ಯಸ್ಥ ಆರ್ಕೆಎಸ್ ಭದೌರಿಯಾ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಯಾವುದೇ ದಾಳಿಯಲ್ಲಿ ಚೀನಾದ ಬಳಿ ಭಾರತದಷ್ಟು ಉತ್ತಮವಾದ ಶಸ್ತ್ರಾಸ್ತ್ರಗಳು ಇಲ್ಲ. ಆದರೆ, ನಮ್ಮ ಬಳಿ 5ನೇ ತಲೆಮಾರಿನ ಸುಧಾರಿತ ಸಂವೇದಕಗಳು ಹಾಗೂ ಯುದ್ಧ ತಂತ್ರಜ್ಞಾನವಿದೆ ಎಂದಿದ್ದಾರೆ.
ವಾಯುಪಡೆ ಮುಖ್ಯಸ್ಥ ಭದೌರಿಯಾ ಸುದ್ದಿಗೋಷ್ಠಿ ಕಳೆದ ಕೆಲ ತಿಂಗಳಿಂದ ಭಾರತ-ಚೀನಾ ನಡುವೆ ಲಡಾಖ್‌ನ ಗಡಿ ನಿಯಂತ್ರಣ ರೇಖೆ ವಿಚಾರವಾಗಿ ಗೊಂದಲದ ವಾತಾವರಣ ನಿರ್ಮಾಣಗೊಂಡಿದ್ದು, ಇದೇ ವಿಚಾರವಾಗಿ ಸೆಪ್ಟೆಂಬರ್ 10 ರಂದು ಮಾಸ್ಕೋದಲ್ಲಿ ನಡೆದ ಶಾಂಘೈ ಸಮಾವೇಶದಲ್ಲಿ ಕೇಂದ್ರ ರಕ್ಷಣಾ ಸಚಿವರು ಹಾಗೂ ಚೀನಾ ಸಚಿವರ ನಡುವೆ ಮಾತುಕತೆ ಸಹ ನಡೆದಿದೆ.
ಅಕ್ಟೋಬರ್ 8ರಂದು ವಾಯುಪಡೆಯ ದಿನಾಚರಣೆ ಆಗಿದ್ದು, ಅದಕ್ಕೂ ಮೊದಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಭದೌರಿಯಾ, ಭಾರತದ ವಾಯು ಶಕ್ತಿ ಎದುರು ಚೀನಾದ ಸಾಮರ್ಥ್ಯ ಅಷ್ಟೊಂದು ಗಟ್ಟಿಯಾಗಿಲ್ಲ. ಅಂತಹ ಸನ್ನಿವೇಶ ಎದುರಾದರೆ ನಾವು ಯುದ್ಧಕ್ಕೆ ಸಿದ್ಧವಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಬಲ ತುಂಬಿದ ರಫೆಲ್
ಈಗಾಗಲೇ ಭಾರತೀಯ ವಾಯುಸೇನೆ ಬತ್ತಳಿಕೆಗೆ ರಫೆಲ್ ಯುದ್ಧ ವಿಮಾನ ಸೇರಿಕೊಂಡಿದ್ದು, ಇವು ನಮಗೆ ಮತ್ತಷ್ಟು ಶಕ್ತಿ ನೀಡಿವೆ ಎಂದು ಏರ್ ಚೀಫ್ ಮಾರ್ಷಲ್ ಹೇಳಿದ್ದಾರೆ. ಭಾರತ ಈಗಾಗಲೇ ಫೈಟರ್ ಜೆಟ್ಗಳಾದ ಸುಖೋಯ್ 30 ಎಂಕೆಐ, ಜಾಗ್ವಾರ್ ಮತ್ತು ಮಿರಾಜ್ 2000 ವಿಮಾನಗಳನ್ನು ಪೂರ್ವ ಲಡಾಖ್‌ನ ಪ್ರಮುಖ ಗಡಿ ಪ್ರದೇಶಗಳಲ್ಲಿ ನಿಯೋಜನೆ ಮಾಡಿದೆ. ಭಾರತದ ಬಳಿ ಇರುವ ಐದು ರಫೆಲ್ ಯುದ್ಧ ವಿಮಾನಗಳನ್ನ ಪೂರ್ವ ಲಡಾಖ್ ಬಳಿ ನಿಯೋಜನೆ ಮಾಡಲು ನಿರ್ಧರಿಸಲಾಗಿದೆ ಎಂದಿದ್ದಾರೆ.