ನವದೆಹಲಿ:ಮಹಾಮಾರಿ ಕೊರೊನಾ ವಿರುದ್ಧ ತುರ್ತು ಬಳಕೆ ಮಾಡಲು ಈಗಾಗಲೇ ಎರಡು ವ್ಯಾಕ್ಸಿನ್ಗಳಿಗೆ ಷರತ್ತುಬದ್ಧ ಅನುಮತಿ ನೀಡಲಾಗಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡರು.
ತುರ್ತು ಸಂದರ್ಭಗಳಲ್ಲಿ ಬಳಕೆ ಮಾಡಲು ಎರಡು ಲಸಿಕೆಗಳಿಗೆ ಜನವರಿ 3ರಂದು ಅನುಮೋದನೆ ನೀಡಲಾಗಿದ್ದು, ಅಭ್ಯಾಸ ಹಂತದಲ್ಲಿನ ಪ್ರತಿಕ್ರಿಯೆ ಆಧಾರದ ಮೇಲೆ ಮುಂದಿನ 10 ದಿನಗಳೊಳಗೆ ಕೋವಿಡ್-19 ಲಸಿಕೆ ಹೊರತರಲು ಸಿದ್ಧತೆ ನಡೆಸಲಾಗಿದೆ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ. ಮೊದಲ ಬಾರಿಗೆ 1 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು, ಜೊತೆಗೆ ಎರಡು ಕೋಟಿ ಮುಂಚೂಣಿ ಕಾರ್ಯಕರ್ತರು, ಅವಶ್ಯಕ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ತುರ್ತು ಬಳಕೆ ಮಾಡಲು ನೀಡಿರುವ ದಿನಾಂಕದಿಂದ ಮುಂದಿನ 10 ದಿನಗಳಲ್ಲಿ ಕೋವಿಡ್-19 ಲಸಿಕೆಗಳನ್ನು ನೀಡಲು ನಾವು ಸಿದ್ಧರಾಗಿದ್ದೇವೆ. ಈಗಾಗಲೇ ಎರಡು ಲಸಿಕೆಗಳಿಗೆ ಅನುಮೋದನೆ ದೊರತಿದೆ. ಪುಣೆ ಮೂಲದ ಸಿರಂ ಸಂಸ್ಥೆ ಅಭಿವೃದ್ಧಿಪಡಿಸುತ್ತಿರುವ ಆಕ್ಸಫರ್ಡ್ ವಿಶ್ವವಿದ್ಯಾಲಯದ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆಗಳಿಗೆ ಈಗಾಗಲೇ ಅನುಮತಿ ನೀಡಲಾಗಿದೆ.