ನವದೆಹಲಿ: ಕೋವಿಡ್-19 ಸೋಂಕು ಹರಡುವಿಕೆ ತಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಕೇಂದ್ರ ಸರ್ಕಾರಕ್ಕೆ ವಿಶ್ವದ ಬಹೃತ್ ಚಿಲ್ಲರೆ ಉದ್ಯಮ ಸಂಸ್ಥೆ ವಾಲ್‌ಮಾರ್ಟ್ ಮತ್ತು ಇ- ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ಜಂಟಿಯಾಗಿ ನೆರವಿನ ಹಸ್ತಚಾಚಿದೆ. ವಾಲ್‌ಮಾರ್ಟ್ ಫೌಂಡೇಷನ್ ಇಂದು 46 ಕೋಟಿ ರೂ. ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದೆ.
ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಪಿಪಿಇ ಕಿಟ್, ಎನ್-95 ಮಾಸ್ಕ್ ಹಾಗೂ ಇತರೆ ವೈದ್ಯಕೀಯ ಉಪಕರಣಗಳಿಗಾಗಿ 38.3 ಕೋಟಿ ರೂ. ವ್ಯಯಿಸಲಿದೆ. ಎನ್‌ಜಿಒಗಳ ಮೂಲಕ ಅಗತ್ಯ ಸೌಲಭ್ಯವನ್ನು ಸಹ ವಿತರಣೆ ಮಾಡಲಿವೆ.
ವಾಲ್‌ಮಾರ್ಟ್ ಫೌಂಡೇಷನ್ 7.7 ಕೋಟಿ ರೂ. ಅನ್ನು ಗೂಂಜ್ ಮತ್ತು ಶ್ರೀಜನ್ ಎಂಬ ಎನ್‌ಜಿಒಗಳಿಗೆ ದೇಣಿಗೆ ನೀಡಲಿದೆ. ಈ ಹಣವನ್ನು ಗ್ರಾಮೀಣ ಭಾಗದ ಸಾಮಾನ್ಯ ಜನ, ರೈತರು ಹಾಗೂ ಸಣ್ಣ ವ್ಯಾಪಾರಿಗಳಿಗೆ ಆಹಾರ, ಔಷಧಿ ಹಾಗೂ ಇತರ ಅಗತ್ಯ ವಸ್ತುಗಳ ಪೂರೈಕೆಗೆ ವಿನಿಯೋಗ ಮಾಡಲಿದೆ.
ಈ ಬಗ್ಗೆ ಮಾತನಾಡಿದ ವಾಲ್‌ಮಾರ್ಟ್ ಫೌಂಡೇಷನ್‌ನ ಉಪಾಧ್ಯಕ್ಷ ಕಥ್ಲೀನ್ ಮ್ಯಾಕ್‌ಲಾಫ್ಲೀನ್, ಭಾರತದಲ್ಲಿರುವ ನಮ್ಮ ಗ್ರಾಹಕರು ಮತ್ತು ಸಹವರ್ತಿಗಳ ಮೇಲೆ ಕೋವಿಡ್-19 ಪರಿಣಾಮ ಬೀರಿದೆ. ಹೀಗಾಗಿ, ನಾವು ಸದಾ ನಿಮ್ಮೊಂದಿಗೆ ನಿಲ್ಲುತ್ತೇವೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಾವೆಲ್ಲರೂ ಸೇರಿ ಆರೋಗ್ಯ ಸೇವಾ ಕಾರ್ಯಕರ್ತರ ಬೆಂಬಲಕ್ಕೆ ನಿಲ್ಲಬೇಕು. ಈಗಾಗಲೇ ಪರಿಹಾರ ಕಾರ್ಯ ಕೈಗೊಂಡಿರುವ ಸರ್ಕಾರಿ ಸಂಸ್ಥೆಗಳು ಮತ್ತು ಎನ್‌ಜಿಒಗಳಿಗೆ ಕೃತಜ್ಞರಾಗಿದ್ದೇವೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯಕೀಯ ಕಾರ್ಯಕರ್ತರಿಗೆ ವಾಲ್‌ಮಾರ್ಟ್ ಮತ್ತು ಫ್ಲಿಪ್‌ಕಾರ್ಟ್ ಅಗತ್ಯ ನೆರವು ನೀಡುತ್ತಿದೆ. ಈಗಾಗಲೇ 3 ಲಕ್ಷ ಎನ್-95 ಮಾಸ್ಕ್ ಮತ್ತು 10 ಲಕ್ಷ ಮೆಡಿಕಲ್ ಗೌನ್ ಖರೀದಿಸಿದ್ದೇವೆ. ಈ ಹೊಸ ಸವಾಲನ್ನು ಎದುರಿಸಲು ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳ ಜೊತೆಗೂಡಿ ತುರ್ತು ಪರಿಹಾರಗಳನ್ನು ಘೋಷಿಸಿದ್ದೇವೆ ಎಂದು ಫ್ಲಿಪ್‌ಕಾರ್ಟ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ತಿಳಿಸಿದ್ದಾರೆ.