ವಿಶಾಖಪಟ್ಟಣಂ:ಆಂಧ್ರಪ್ರದೇಶದ ವಿಶಾಖಪಟ್ಟಣಂನ ರಾಸಾಯನಿಕ ಸ್ಥಾವರದಿಂದ ಗುರುವಾರ ಮುಂಜಾನೆ ಅನಿಲ ಸೋರಿಕೆಯಾಗಿ ಕನಿಷ್ಠ 9 ಜನರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ವರದಿಗಳ ಪ್ರಕಾರ, ಎಲ್ಜಿ ಪಾಲಿಮರ್ಸ್ನ ಕೆಮಿಕಲ್ ಫ್ಯಾಕ್ಟರಿಯ ಅನಿಲ ಸ್ಥಾವರದಿಂದ 'ಸ್ಟೈರೀನ್ ಅನಿಲ' ಸೋರಿಕೆಯಾಗಿದೆ. ಇದರಿಂದ ಜನರು ಉಸಿರಾಟದ ಸಮಸ್ಯೆ ಎದುರಾಗಿ ನಿಂತಲ್ಲೇ ಕುಸಿದು ಬೀಳುತ್ತಿದ್ದಾರೆ. ಅಲ್ಲದೆ ಕಣ್ಣು, ಚರ್ಮ ಮತ್ತು ಮೂಗಿಗೆ ಕಿರಿಕಿರಿ ಉಂಟಾಗಿದ್ದು 300ಕ್ಕೂ ಹೆಚ್ಚು ಜನ ಆಸ್ಪತ್ರೆ ಸೇರಿದ್ದಾರೆ.
ಸ್ಟೈರೀನ್ ಅನಿಲವನ್ನು ಯಾವುದಕ್ಕೆ ಬಳಸಲಾಗುತ್ತದೆ?
ಸ್ಟೈರೀನ್ ಅನಿಲವನ್ನು ಯಾವುದಕ್ಕೆ ಬಳಸಲಾಗುತ್ತದೆ? ಸ್ಟೈರೀನ್ ಬಣ್ಣರಹಿತ ಸುಡುವಂತಹ ದ್ರವ ರೂಪದ ಅನಿಲವಾಗಿದ್ದು, ಅದು ಸುಲಭವಾಗಿ ಆವಿಯಾಗುತ್ತದೆ. ಇದನ್ನು ಪಾಲಿಸ್ಟೈರೀನ್ ಪ್ಲಾಸ್ಟಿಕ್ ಮತ್ತು ರಾಳಗಳು, ಫೈಬರ್ಗ್ಲಾಸ್, ರಬ್ಬರ್ ಮತ್ತು ಲ್ಯಾಟೆಕ್ಸ್ಗಲ್ಲಿ ಬಳಸಲಾಗುತ್ತದೆ. ಪ್ಲಾಸ್ಟಿಕ್ ಪೈಪ್ಗಳು, ಆಟೋಮೊಬೈಲ್ ಭಾಗಗಳು, ಕುಡಿಯುವ ಕಪ್ಗಳ ತಯಾರಿಯಲ್ಲಿಯೂ ಬಳಕೆಯಾಗುತ್ತವೆ.
ಇದರಿಂದ ಮನುಷ್ಯನ ಮೇಲಾಗುವ ಪರಿಣಾಮಗಳೇನು?
ಮಾನವ ದೇಹಕ್ಕೆ ಸ್ಟೈರೀನ್ ಅನಿಲ ಸೋಕಿದರೆ ಮುಖ್ಯವಾಗಿ ಉಸಿರಾಟದ ಸಮಸ್ಯೆಗಳು ಉಂಟಾಗುತ್ತವೆ. ಇದಲ್ಲದೆ ಕಣ್ಣಿನಲ್ಲಿ ಕಿರಿಕಿರಿ ಮತ್ತು ಕೆರಳಿಕೆ ಹಾಗೂ ಜಠರದ ಕರುಳಿನ ಮೇಲೂ ಪರಿಣಾಮ ಬೀರುತ್ತದೆ.
ಇವಿಷ್ಟೇ ಅಲ್ಲದೆ ತಲೆನೋವು, ನಿತ್ರಾಣ, ಬಲಹೀನತೆ, ಖಿನ್ನತೆ, ಕರ್ಣದೋಷ ಸೇರಿದಂತೆ ಕಿಡ್ನಿ ಸಮಸ್ಯೆಗಳೂ ಉಂಟಾಗುತ್ತವೆ. ಈ ಅನಿಲ ಅಪಾಯಕಾರಿಯಾಗಿದ್ದು, ಈಗಾಗಲೇ 5000ಕ್ಕೂ ಹೆಚ್ಚು ಮಂದಿ ಘಟನೆಯಿಂದ ಅಸ್ವಸ್ಥರಾಗಿರುವ ಮಾಹಿತಿ ಲಭ್ಯವಾಗಿದೆ.