ನವದೆಹಲಿ: ವಿಶಾಖಪಟ್ಟಣಂನ ಪಾಲಿಮರ್ ಸ್ಥಾವರದಲ್ಲಿ ಅನಿಲ ಸೋರಿಕೆಯಾದ ನಂತರ ಎಲ್‌ಜಿ ಕೆಮ್ ಕಂಪನಿಯು ತನ್ನ ಎಲ್ಲಾ ಅಪಾಯಕಾರಿ ಅಂಶಗಳನ್ನು ಹೋಗಲಾಡಿಸಲು ದಕ್ಷಿಣ ಕೊರಿಯಾಕ್ಕೆ ಸ್ಟೈರೀನ್ ಮೊನೊಮರ್ ದಾಸ್ತಾನು ಸಾಗಣೆ ಪ್ರಾರಂಭಿಸಿದೆ.
ಪ್ರಸ್ತುತವಾಗಿ ಯಥಾಸ್ಥಿತಿ ಕ್ರಮಗಳಿಂದ ಸಂಪೂರ್ಣವಾಗಿ ಸ್ಥಾವರ ನಿಯಂತ್ರಿಸಲ್ಪಟ್ಟಿದೆ. ಈ ಸ್ಥಾವರದಲ್ಲಿ ಸ್ಟೈರೀನ್ ಮೊನೊಮರ್ (ಎಸ್‌ಎಂ) ದಾಸ್ತಾನು ಸಾಗಣೆಯನ್ನು ಪ್ರಾರಂಭಿಸಿದ್ದು, ದಕ್ಷಿಣ ಕೊರಿಯಾಗೆ ಹಡಗುಗಳ ಮೂಲಕ ಬಂದರಿನಲ್ಲಿರುವ ಸ್ಟೈರೀನ್ ಟ್ಯಾಂಕ್‌ಗಳನ್ನು ಸಾಗಿಸಲು ಪ್ರಾರಂಭಿಸಿದ್ದೇವೆ ಎಂದು ಎಲ್‌ಜಿ ಕೆಮ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಅನಿಲ ಸೋರಿಕೆಯಿಂದ ಸಂತ್ರಸ್ತ ಕುಟುಂಬಗಳಿಗೆ ಮತ್ತು ಬಲಿಪಶುಗಳಿಗೆ ಸಾಧ್ಯವಿರುವ ಎಲ್ಲಾ ಬೆಂಬಲವನ್ನು ಕಂಪನಿ ನೀಡಲಿದ್ದು, ಸರ್ಕಾರಿ ಸಂಸ್ಥೆಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರೆಸಲಿದೆ ಎಂದು ಎಲ್‌ಜಿ ಪಾಲಿಮರ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದಕ್ಷಿಣ ಕೊರಿಯಾದ ರಾಸಾಯನಿಕಗಳ ಕಂಪನಿಯು, ವಿಶಾಖಪಟ್ಟಣಂನ ಅನಿಲ ಸೋರಿಕೆ ಘಟನೆಯ ತನಿಖೆಗಾಗಿ ಸಿಯೋಲ್‌ನಿಂದ ಎಂಟು ಸದಸ್ಯರ ತಂಡವನ್ನು ಕಳುಹಿಸಿದ್ದು, 11 ಜನರನ್ನು ಬಲಿ ತೆಗೆದುಕೊಂಡಿದ್ದ ಮತ್ತು ಸಾವಿರಾರು ಜನರನ್ನು ಸ್ಥಳಾಂತರಿಸುವಂತೆ ಮಾಡಿದ ದುರಂತದ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿದೆ ಎಂದು ಹೇಳಿದೆ.
ಉತ್ಪಾದನೆ, ಪರಿಸರ ಮತ್ತು ಸುರಕ್ಷತಾ ತಜ್ಞರ ತಂಡವು ಪ್ರಸ್ತುತ ಘಟನೆಯ ಕಾರಣವನ್ನು ಪರಿಶೀಲಿಸುತ್ತಿದ್ದು, ಈಗಾಗಲೇ ಜವಾಬ್ದಾರಿಯುತ ಪುನರ್ವಸತಿಗೆ ಬೆಂಬಲ ನೀಡುತ್ತಿದೆ. ಇದು ಈ ತಂಡದ ಮುಖ್ಯ ಉದ್ದೇಶವಾಗಿದೆ ಎಂದು ಕಂಪನಿ ತಿಳಿಸಿದೆ.
ಇದಲ್ಲದೆ, ಘಟನೆಯ ಕಾರಣವನ್ನು ವಿಶ್ಲೇಷಿಸಲು ಹಾಗೂ ಇಂತಹ ಅನಾಹುತಗಳನ್ನು ತಡೆಗಟ್ಟಲು ತ್ವರಿತ ರೀತಿಯಲ್ಲಿ ಬೆಂಬಲ ನೀಡಲು ತಂಡವು ಸಂಬಂಧಿತ ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ.
ಸದ್ಯ ಉಂಟಾಗಿರುವ ಪರಿಸ್ಥಿತಿಯನ್ನು ಪರಿಹರಿಸಲು ಹಾಗೂ ಭವಿಷ್ಯದಲ್ಲಿ ಈ ತರಹದ ಯಾವುದೇ ಘಟನೆಗಳು ಮರುಕಳಿಸದಂತೆ ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದು ಕಂಪನಿ ಭರವಸೆ ನೀಡಿದೆ.