ಚೆನ್ನೈ: ವಿಶಾಖಪಟ್ಟಣದ ಜಿಎಂ ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಇಂದು ಸಂಭವಿಸಿದ ಭೀಕರ ವಿಷಾನಿಲ ಸೋರಿಕೆಯ ಘಟನೆಯಿಂದ ಸಾರ್ವಜನಿಕ ಹೊಣೆಗಾರಿಕೆ ವಿಮೆಯ ಅಗತ್ಯತೆಯ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ ಎಂದು ವಿಮಾ ಕ್ಷೇತ್ರದ ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.
ಏನಿದು ಸಾರ್ವಜನಿಕ ಹೊಣೆಗಾರಿಕೆ ವಿಮೆ: ಕಾರ್ಖಾನೆಯೊಂದರಲ್ಲಿನ ಅಪಾಯಕಾರಿ ವಸ್ತುಗಳ ನಿರ್ವಹಣೆಯಿಂದ ಸಾರ್ವಜನಿಕರ ಸಾವು ಅಥವಾ ಸಾರ್ವಜನಿಕ ಆಸ್ತಿಗೆ ಉಂಟಾಗುವ ಹಾನಿಗಳಿಂದ ಪಾಲಿಸಿದಾರರಿಗೆ ಥರ್ಡ್ ಪಾರ್ಟಿ ವಿಮಾ ಸುರಕ್ಷೆ ನೀಡುವುದೇ ಸಾರ್ವಜನಿಕ ಹೊಣೆಗಾರಿಕೆ ವಿಮೆಯಾಗಿದೆ.
ಮುಂಬೈನಲ್ಲಿ ಪ್ರಧಾನ ಕಚೇರಿ ಹೊಂದಿರುವ ಜಿಎಂ ಪಾಲಿಮರ್ಸ್ ಹಲವಾರು ಖಾಸಗಿ ಹಾಗೂ ಸರ್ಕಾರಿ ವಿಮಾ ಕಂಪನಿಗಳಿಂದ ವಿಮಾ ಸುರಕ್ಷೆ ಪಡೆದಿದೆಯಾದರೂ, ಸಾರ್ವಜನಿಕ ಹೊಣೆಗಾರಿಕೆ ವಿಮಾ ಮೊತ್ತದ ಬಗ್ಗೆ ತಿಳಿದಿಲ್ಲ ಎಂದು ವಿಮಾ ವಲಯದ ಮೂಲಗಳು ತಿಳಿಸಿವೆ. "ಸಾರ್ವಜನಿಕ ಹೊಣೆಗಾರಿಕೆ ವಿಮೆ ಕಾನೂನಿನ ಪ್ರಕಾರ ಹೊಣೆಗಾರಿಕೆಗಳನ್ನು ತೀರಾ ಕಡಿಮೆ ಮಟ್ಟದಲ್ಲಿಡಲಾಗಿದ್ದು, ಇವನ್ನು ಹೆಚ್ಚಿಸುವುದು ಅಗತ್ಯ" ಎಂದು ವಿಮಾ ಪರಿಣಿತರೊಬ್ಬರು ಹೇಳಿದರು.
ಸಾರ್ವಜನಿಕ ಹೊಣೆಗಾರಿಕೆ ವಿಮಾ ಕಾನೂನಿನಡಿ ಪ್ರತಿ ಅಪಘಾತಕ್ಕೆ 5 ಕೋಟಿ ರೂ. ನಿಗದಿಪಡಿಸಲಾಗಿದ್ದು, ಬಹುತೇಕ ಕಂಪನಿಗಳು ಇದೇ ಮೊತ್ತಕ್ಕೆ ತಮ್ಮ ಹೊಣೆಗಾರಿಕೆಯನ್ನು ಸೀಮಿತಗೊಳಿಸುತ್ತಿವೆ. ಕಡ್ಡಾಯ ವಿಮೆ ಕಾಯ್ದೆಯಡಿ ಸಾವು ಅಥವಾ ಶಾಶ್ವತ ಅಂಗವಿಕಲತೆ ಉಂಟಾದಲ್ಲಿ ಪ್ರತಿ ವ್ಯಕ್ತಿಗೆ 25 ಸಾವಿರ ರೂ. ಪರಿಹಾರ ನಿಗದಿಪಡಿಸಲಾಗಿದೆ. ಹಾಗೆಯೇ ವೈದ್ಯಕೀಯ ವೆಚ್ಚಗಳಿಗಾಗಿ 12,500 ಕೋಟಿ ರೂ. ಹಾಗೂ ಆಸ್ತಿ ಹಾನಿಗೆ 6,000 ರೂ. ನಿಗದಿಪಡಿಸಲಾಗಿದೆ.
ಸಾರ್ವಜನಿಕ ಹೊಣೆಗಾರಿಕೆ ವಿಮಾ ಕಾಯ್ದೆಯಂತೆ ಅಪಾಯಕಾರಿ ವಸ್ತುಗಳನ್ನು ಬಳಸುವ ಅಥವಾ ಸಾಗಿಸುವ ಕಂಪನಿಗಳು ತಮ್ಮ ಕಂಪನಿ ಆರಂಭಿಸುವ ಮುನ್ನ ಈ ಪಾಲಿಸಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.