ಬಿಹಾರ: ವಿಷ್ಣುಪದ ಮಂದಿರ ಬಿಹಾರದ ಗಯಾದಲ್ಲಿರುವ ಪುರಾತನ ದೇವಾಲಯ. ಶ್ರೀವಿಷ್ಣುವಿನ ಪಾದದ ಗುರುತುಗಳು ಈ ಮಂದಿರದಲ್ಲಿದ್ದು, ಭಗವಂತನ ಪಾದದ ಹೆಜ್ಜೆಯನ್ನು ಪೂಜಿಸುವ ವಿಶ್ವದ ಏಕೈಕ ದೇವಾಲಯ ಇದಾಗಿದೆ.
ದೇವಾಲಯವು ವಿಶೇಷತೆಯಿಂದ ಕೂಡಿದ್ದು, ಮೇಲ್ಭಾಗದಲ್ಲಿ 50 ಕೆಜಿ ಚಿನ್ನದ ಕಳಶ ಮತ್ತು 50 ಕೆಜಿಯ ಚಿನ್ನದ ಧ್ವಜವಿದೆ. ಗರ್ಭಗುಡಿಯಲ್ಲಿ 50 ಕೆಜಿ ಬೆಳ್ಳಿಯ ಛತ್ರಿ ಹಾಗೂ 50 ಕೆಜಿ ಬೆಳ್ಳಿಯ ಅಷ್ಟಪಠಲವಿದೆ. ಅದರಲ್ಲಿ ವಿಷ್ಣುವಿನ ಪಾದದ ಗುರುತುಗಳಿವೆ. ಈ ದೇವಾಲಯವನ್ನು ಧರ್ಮಶೀಲ ಎಂದು ಸಹ ಕರೆಯುತ್ತಾರೆ.
ಬಿಹಾರದ ಗಯಾದ ವಿಷ್ಣುಪದ ಮಂದಿರ ಗರ್ಭಗುಡಿಯು ತ್ರಿಕೋನದಲ್ಲಿದ್ದು, ಅದರ ಪೂರ್ವ ದ್ವಾರವು ಬೆಳ್ಳಿಯಿಂದ ಮಾಡಲ್ಪಟ್ಟಿದೆ. ವಿಷ್ಣುವಿನ ಪಾದಗಳ ಉದ್ದ ಸುಮಾರು 40 ಸೆಂಟಿ ಮೀಟರ್ ಇದ್ದು, ರಕ್ತ ಚಂದನದಿಂದ ಅಲಂಕರಿಸಲಾಗಿದೆ. ಹಾಗೂ ಅಲ್ಲಿ ಶಂಖ, ಚಕ್ರ, ಗಧಾ ಮತ್ತು ಪದ್ಮವನ್ನು ಕೆತ್ತಲಾಗಿದೆ.
ಇಲ್ಲಿ ಪಿಂಡದಾನ ಮಾಡಿದರೆ ಪೂರ್ವಜರಿಗೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆಯಿದೆ. ಪಿತೃಪಕ್ಷದಲ್ಲಿ ಪಿಂಡದಾನ ಕಾರ್ಯಕ್ಕಾಗಿ ಇಲ್ಲಿಗೆ ಅನೇಕ ಜನರು ಆಗಮಿಸುತ್ತಾರೆ. ತಮ್ಮ ತಂದೆಯ ಮೋಕ್ಷಕ್ಕಾಗಿ ದೇಶ ಮತ್ತು ವಿದೇಶಗಳಿಂದ ಬಂದು ಕಾರ್ಯ ಮಾಡುತ್ತಾರೆ.
ಭಗವಾನ್ ವಿಷ್ಣು ಇಲ್ಲಿ ಗಯಾಸುರನನ್ನು ಕೊಂದನು. ಆದ್ದರಿಂದ ಈ ಸ್ಥಳಕ್ಕೆ ಗಯಾ ಎಂಬ ಹೆಸರು ಬಂದಿದೆ ಎಂಬ ಪ್ರತೀತಿಯಿದೆ.
ಭಗವಾನ್ ಬ್ರಹ್ಮ, ಶಿವ ಮತ್ತು ವಿಷ್ಣು ಜೊತೆಗೆ ಧರ್ಮರಾಜ ಹಾಗೂ ಯಮ ಗಯಾದಲ್ಲಿ ನೆಲೆಸಿದ್ದಾರೆ ಎಂದು ನಂಬಲಾಗಿದೆ. ವಿಷ್ಣು ಸ್ವತಃ ಪಿತೃ ದೇವತೆಯಾಗಿ ಇಲ್ಲಿ ಕುಳಿತಿದ್ದಾನೆ ಎಂಬ ನಂಬಿಕೆಯಿದೆ. ಹಾಗೂ ರಾಮನು ಸೀತೆಯೊಂದಿಗೆ ಬಂದು, ತಂದೆ ರಾಜ ದಶರಥರ ಪಿಂಡದಾನವನ್ನು ಇಲ್ಲಿ ಮಾಡಿದ್ದನು ಎನ್ನಲಾಗಿದೆ.
ಇಲ್ಲಿ ಪಿಂಡದಾನ ಮಾಡಿದರೆ ಆತ್ಮಕ್ಕೆ ಮೋಕ್ಷ ದೊರೆಯುತ್ತದೆ ಎಂಬ ನಂಬಿಕೆಯಿದೆ. ಆದ್ದರಿಂದ ಇಲ್ಲಿ ಈ ಕಾರ್ಯವನ್ನು ಹೆಚ್ಚಾಗಿ ಮಾಡಲಾಗುತ್ತದೆ.