ಇಂದೋರ್:ಬಾಂಗ್ಲಾ ದೇಶದ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಮಯಾಂಕ್ ಅಗರ್‌ವಾಲ್ ಬ್ಯಾಟಿಂಗ್ನಲ್ಲಿ ಅಬ್ಬರಿಸಿದ್ದು ಮತ್ತೊಂದು ದ್ವಿಶತಕ ಸಿಡಿಸಿ ಮಿಂಚಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ದ್ವಿಶತಕ ದಾಖಲೆ ಮಾಡಿದ್ದ ಮಯಾಂಕ್ ಇದೀಗ ಕೇವಲ 44 ದಿನಗಳಲ್ಲಿ ಅಂದರೆ ತಾವಾಡಿದ 12ನೇ ಇನ್ನಿಂಗ್ಸ್ನಲ್ಲಿ ಮತ್ತೊಂದು ದ್ವಿಶತಕ ಸಿಡಿಸುವ ಮೂಲಕ ತಮ್ಮ ಬಳಿ ಇರುವ ಬ್ಯಾಟಿಂಗ್ ಸಾಮರ್ಥ್ಯ ಏನು? ಅನ್ನೋದನ್ನು ಕ್ರಿಕೆಟ್ ಲೋಕಕ್ಕೆ ತೋರಿಸಿದ್ದಾರೆ.
ಆರಂಭಿಕರಾಗಿ ಕಣಕ್ಕಿಳಿದಿದ್ದ ಮಯಾಂಕ್ 32 ರನ್ಗಳಿಕೆ ಮಾಡಿದಾಗ ಎದುರಾಳಿ ತಂಡದ ಆಟಗಾರನ ಕ್ಯಾಚ್ ಕೈಚೆಲ್ಲುತ್ತಾನೆ. ಇದರ ಸದುಪಯೋಗ ಪಡೆದುಕೊಂಡ ಮಯಾಂಕ್ ಎದುರಾಳಿ ಬೌಲರ್ಗಳ ಮೇಲೆ ಗದಾ ಪ್ರಹಾರವನ್ನೇ ಮಾಡುತ್ತಾರೆ.
28 ವರ್ಷದ ಬ್ಯಾಟ್ಸ್‌ಮನ್ ಮಯಾಂಕ್ ಟೆಸ್ಟ್ನಲ್ಲಿ ಮೂರನೇ ಶತಕ ಸಿಡಿಸುತ್ತಿದ್ದಂತೆ 150ರ ಗಡಿ ಸುಲಭವಾಗಿ ದಾಟುತ್ತಾರೆ. ಈ ವೇಳೆ ಮೈದಾನದಲ್ಲಿ ಸಂಭ್ರಮಿಸುತ್ತಿದ್ದಾಗ ವಿರಾಟ್ ಕೊಹ್ಲಿ 200ರ ಗಡಿ ದಾಟು ಎಂದು ಪೆವಿಲಿಯನ್ನಿಂದ ಸನ್ನೆ ಮಾಡುತ್ತಾರೆ. ಅದರಂತೆ ಬ್ಯಾಟ್ ಬೀಸಿದ ಆರಂಭಿಕ ಆಟಗಾರ ಸುಲಭವಾಗಿ 200ರ ಗಡಿ ಕ್ರಾಸ್ ಮಾಡುತ್ತಾರೆ. ಈ ವೇಳೆ ಸಂಭ್ರಮಕ್ಕಿಳಿದ ಮಯಾಂಕ್ ವಿರಾಟ್ ಕಡೆ ಕೈ ಮಾಡಿ ತಾನು 200ರ ಗಡಿ ದಾಟಿರುವುದಾಗಿ ಹೇಳಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಕೊಹ್ಲಿ ತ್ರಿಶತಕ ಗಳಿಕೆ ಮಾಡುವಂತೆ ಸೂಚನೆ ನೀಡಿದ್ದಾರೆ.
200+ ಗಡಿ ದಾಟುವಂತೆ ತಮ್ಮ ಬ್ಯಾಟಿಂಗ್ನಲ್ಲಿ ಮತ್ತಷ್ಟು ಬದಲಾವಣೆ ಮಾಡಿ ಬೌಂಡರಿಗಳ ಸುರಿಮಳೆಗೈಯಲು ಅಗರವಾಲ್ ಮುಂದಾಗುತ್ತಾರೆ. ಆದರೆ 243 ರನ್ಗಳಿಸಿದ ವೇಳೆ ಕ್ಯಾಚ್ ನೀಡಿ ನಿರ್ಗಮಿಸುತ್ತಾರೆ.