ಚಂಡೀಗಢ: ಕರ್ತವ್ಯ ಲೋಪ ಹಿನ್ನೆಲೆ ಹರಿಯಾಣದ ಗೃಹ ಸಚಿವ ಅನಿಲ್ ವಿಜ್ ಅವರು ಎಸ್‌ಎಚ್‌ಒ ಮತ್ತು ಐವರು ಪೊಲೀಸರನ್ನು ಅಮಾನತು ಮಾಡಿದ್ದಾರೆ.
ಸಾರ್ವಜನಿಕ ಕುಂದುಕೊರತೆಗಳನ್ನು ಪರಿಹರಿಸಲು ಅನಿಲ್ ವಿಜ್ ಅವರು ರೋಹ್ಟಕ್ಗೆ ಆಗಮಿಸಿದ್ದರು.ಈ ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿದ್ದಾರೆ. ನಂತರ ವಿಜ್ ಅವರು, ಪೊಲೀಸ್ ಠಾಣೆಯಲ್ಲಿದ್ದ ವಿವಿಧ ದಾಖಲೆಗಳ ಪರಿಶೀಲನೆ ಮುಂದಾಗಿದ್ದಾರೆ. ಆ ವೇಳೆ ಡ್ರಾಯರ್‌ಗಳಲ್ಲಿಇದ್ದ ಇವಿಧ ದಾಖಲೆಗಳ ಕಡೆ ಕಣ್ಣಾಯಿಸಿದ್ದಾರೆ.
ದಾಖಲೆಗಳನ್ನು ಪರಿಶೀಲಿಸಿದ ವಿಜ್ ಅವರು ಸ್ಥಳದಲ್ಲೇ ಇದ್ದ ಎಸ್‌ಎಚ್‌ಒ ನರೇಶ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಷ್ಟು ಅರ್ಜಿಗಳು ಇಲ್ಲಿ ಏಕೆ ಇವೆ ಯಾವ ಅರ್ಜಿಯನ್ನು ಇತ್ಯರ್ಥಗೊಳಿಸದೆ ಇಲ್ಲೇ ಏಕೆ ಇಟ್ಟಿದ್ದೀರಿ ಎಂದು ಕೇಳಿದ್ದಾರೆ.
ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಅನೇಕ ದಾಖಲೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.ಸಾರ್ವಜನಿಕರು ಸಲ್ಲಿಸಿರುವ ದೂರುಗಳ ಬಗ್ಗೆ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಎಫ್ಐಆರ್ ಪ್ರತಿಗಳನ್ನು ಸಂಬಂಧಿಸಿದವರಿಗೆ ನೀಡುವುದನ್ನು ಬಿಟ್ಟು ಇಲ್ಲೇ ಇಟ್ಟುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ ಅವರು, ಕರ್ತವ್ಯ ಲೋಪ ಹಿನ್ನೆಲೆ ಎಸ್‌ಎಚ್‌ಒ, ಹೆಡ್ ಕಾನ್‌ಸ್ಟೆಬಲ್ ಸೇರಿದಂತೆ ಇತರೆ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.