ನವದೆಹಲಿ:ವಯಸ್ಸಿನ ಕಾರಣ ಈ ಬಾರಿಯ ಲೋಕಸಭೆ ಚುನಾವಣೆಗೆ ಟಿಕೆಟ್ ವಂಚಿತರಾದ ಬಿಜೆಪಿ ಹಿರಿಯನಾಯಕ ಎಲ್.ಕೆ. ಅಡ್ವಾಣಿ ಅವರು ಇಂದು ತಮ್ಮ ಬ್ಲಾಗ್ನಲ್ಲಿ ಮನದಾಳವನ್ನು ತೆರೆದಿಟ್ಟಿದ್ದಾರೆ.
ಬಿಜೆಪಿ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಬ್ಲಾಗ್ನಲ್ಲಿ ಬರೆದುಕೊಂಡಿರುವ ಅಡ್ವಾಣಿ, ಕೆಲವು ಸೂಕ್ಷ್ಮ ವಿಚಾರಗಳನ್ನು ತೆರೆದಿಟ್ಟಿದ್ದಾರೆ. ಪ್ರಧಾನಿ ಮೋದಿ ಅವರು 'ಚುನಾವಣೆ ಪ್ರಜಾಪ್ರಭುತ್ವದ ಹಬ್ಬ' ಎಂದು ಹೇಳಿದ್ದನ್ನು ಉಲ್ಲೇಖಿಸುತ್ತಲೇ, ಎಲ್ಲರಿಗೂ ಇದು ಆತ್ಮಾವಲೋಕನದ ಸಂದರ್ಭ ಕೂಡ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಬ್ಲಾಗ್ನಲ್ಲಿ ಅಡ್ವಾಣಿ ವ್ಯಕ್ತಪಡಿಸಿದ ಮಾತುಗಳು ಇಂತಿದೆ,
'ಏಪ್ರಿಲ್ 6ರಂದು ಬಿಜೆಪಿಯ ಸಂಸ್ಥಾಪನಾ ದಿನದ ಸಂಭ್ರಮ. ಈ ಸಂದರ್ಭ ಬಿಜೆಪಿಗರಿಗೆಲ್ಲರಿಗೂ ಹಿಂದಿನ, ಮುಂದಿನ, ಇಂದಿನ ಬಿಜೆಪಿಯನ್ನು ನೆನೆಯುವುದು ಮುಖ್ಯವಾಗಿದೆ. ಬಿಜೆಪಿಯ ಓರ್ವ ಸ್ಥಾಪಕನಾಗಿ ಈ ಸಂಭ್ರಮವನ್ನು ದೇಶದ ಜನತೆ ಹಾಗೂ ಲಕ್ಷಾಂತರ ಬಿಜೆಪಿ ಕಾರ್ಯಕರ್ತರಿಗೆ ಹಂಚುವುದು ನನ್ನ ಕರ್ತವ್ಯವಾಗಿದೆ. '
'ಈ ವೇಳೆ ನಾನು ಗಾಂಧಿನಗರದ ಜನತೆಗೆ ಆಭಾರಿಯಾಗಿದ್ದೇನೆಂದು ತಿಳಿಸುತ್ತೇನೆ. 1991ರಿಂದ ನನ್ನನ್ನು ಆಯ್ಕೆ ಮಾಡುತ್ತಾ, ಪ್ರೀತಿ, ಬೆಂಬಲ ನೀಡಿದಕ್ಕಾಗಿ ಧನ್ಯವಾದಗಳು. '
'ಮಾತೃಭೂಮಿಗೆ ಸೇವೆ ಸಲ್ಲಿಸಲು 14 ವರ್ಷದವನಿದ್ದಾಗ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರಿದೆ. ಏಳು ದಶಕಗಳ ಪಕ್ಷದೊಂದಿಗಿನ ನನ್ನ ಬಾಂಧವ್ಯ ಬಿಡಿಸಲಾಗದ್ದು. ಮೊದಲು ಭಾರತೀಯ ಜನ ಸಂಘ, ಆನಂತರ ಭಾರತೀಯ ಜನತಾ ಪಕ್ಷ ಎರಡೂ ಪಕ್ಷಗಳ ಸ್ಥಾಪನೆಯ ಸದಸ್ಯನಾಗಿದ್ದೆ. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ ಮತ್ತಿತರ ಶ್ರೇಷ್ಠರೊಂದಿಗಿನ ಒಡನಾಟ ವಿಶೇಷವಾಗಿದೆ. '
'ದೇಶ ಮೊದಲು, ಪಕ್ಷ ನಂತರ, ಸ್ವಂತದ್ದು ಕೊನೆಗೆ ಎಂಬ ತತ್ವವನ್ನೇ ನಾನು ಪಾಲಿಸುತ್ತಾ ಬಂದಿದ್ದೇನೆ. ಬಿಜೆಪಿ ಸಿದ್ಧಾಂತ ವಿರೋಧಿಸುವವರನ್ನು ಶತ್ರುಗಳೆಂದು ಕಾಣದೆ, ವಿರೋಧಿಗಳೆಂದಷ್ಟೇ ಕಂಡಿದ್ದೇನೆ. ಅಂತೆಯೆ, ನಮ್ಮ ರಾಷ್ಟ್ರೀಯತೆ ಪರಿಕಲ್ಪನೆಯನ್ನು ವಿರೋಧಿಸಿದವರನ್ನು ದೇಶ ವಿರೋಧಿಗಳೆಂದು ಕಡೆಗಣಿಸಲಿಲ್ಲ. ಪಕ್ಷವು ಎಲ್ಲ ಜನರ ಆಯ್ಕೆ ಹಾಗೂ ಸ್ವಾತಂತ್ರ್ಯಕ್ಕೆ ಬದ್ಧವಾಗಿದೆ.'
'ಪ್ರಜಾಪ್ರಭುತ್ವದ ರಕ್ಷಣೆ ಹಾಗೂ ಪ್ರಜಪ್ರಭುತ್ವದ ಸಂಸ್ಕೃತಿ ನಮ್ಮ ಪಕ್ಷದೊಳಗೇ ಇವೆ. ಮಾಧ್ಯಮಗಳು ಸೇರಿ ಪ್ರಜಾಪ್ರಭುತ್ವ ಸಂಸ್ಥೆಗಳ ಸ್ವಾತಂತ್ರ್ಯ, ಸಮಗ್ರತೆ , ಸತ್ಯದ ರಕ್ಷಣೆಗೆ ಬಿಜೆಪಿ ಸದಾ ಮುಂದಿರುತ್ತದೆ. ಭ್ರಷ್ಟಾಚಾರ ಮುಕ್ತ ರಾಜಕಾರಣ ನೀಡುವ ಮತದಾನ ಸುಧಾರಣೆಗಳು ಸಹ ನಮ್ಮ ಪಕ್ಷದ ಮತ್ತೊಂದು ಆದ್ಯತೆ ಆಗಿದೆ.'
'ಸತ್ಯ, ರಾಷ್ಟ್ರನಿಷ್ಠೆ, ಲೋಕತಂತ್ರ ಪಕ್ಷದ ಬೆಳವಣಿಗೆಗೆ ಮಾರ್ಗದರ್ಶನ ನೀಡಿವೆ. ಈ ಎಲ್ಲ ಮೌಲ್ಯಗಳ ಮೂಲಕ ಸಾಂಸ್ಕೃತಿಕ ರಾಷ್ಟ್ರವಾದ ಹಾಗೂ ಒಳ್ಳೆಯ ಆಡಳಿತ ಪಕ್ಷದ ಎಂದಿನ ತತ್ವವಾಗಿದೆ. ತುರ್ತು ಸಂದರ್ಭದಲ್ಲಿ ನಾವು ಹೋರಾಡಿದ ರೀತಿ ಇದೇ ಮೌಲ್ಯಗಳನ್ನು ಎತ್ತಿಹಿಡಿದಿದ್ದವು.'
'ಭಾರತದ ಪ್ರಜಾಪ್ರಭುತ್ವವನ್ನು ಬಲಗೊಳಿಸಲು ನಾವೆಲ್ಲಾ ಶ್ರಮಿಸಬೇಕೆಂದು ನಾನು ಕಳಕಳಿಯಿಂದ ಮನವಿ ಮಾಡುತ್ತೇನೆ. ಚುನಾವಣೆಗಳು ಪ್ರಜಾಪ್ರಭುತ್ವದ ಹಬ್ಬ ಎಂಬುದು ಸತ್ಯ. ರಾಜಕೀಯ ಪಕ್ಷಗಳು, ಸಮೂಹ ಮಾಧ್ಯಮಗಳು, ಚುನಾವಣಾ ಪ್ರಾಧಿಕಾರಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಎಲ್ಲರೂ ಪ್ರಾಮಾಣಿಕವಾಗಿ ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭ ಕೂಡ.'
'ಎಲ್ಲರಿಗೂ ನನ್ನ ಶುಭಾಶಯಗಳು'