ಜಮ್ಮು:ಮಹಾಮಾರಿ ಕೋವಿಡ್-19 ವೈರಸ್ ಹರಡುವಿಕೆ ತಡೆಯಲು ವೈಷ್ಣೊದೇವಿ ಯಾತ್ರೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ.
ಜೊತೆಗೆ ಜಮ್ಮು ಮತ್ತು ಕಾಶ್ಮೀರ ರಾಜ್ಯದೊಳಗೆ ಪರ ರಾಜ್ಯದ ಬಸ್ಗಳು ಬರದಂತೆ ಅಲ್ಲಿನ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ.
'ಶ್ರೀ ಮಾತಾ ವೈಷ್ಣೊ ದೇವಿ ಯಾತ್ರೆಯನ್ನು ಇಂದಿನಿಂದಲೇ ರದ್ದುಪಡಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಿಂದ ಬಸ್ಗಳು ಹೊರರಾಜ್ಯಕ್ಕೆ ತೆರಳುವುದು ಹಾಗೂ ಹೊರ ರಾಜ್ಯದ ಬಸ್ಗಳು ರಾಜ್ಯದೊಳಗೆ ಬರುವುದನ್ನು ಇಂದಿನಿಂದಲೇ ನಿಷೇಧಿಸಲಾಗಿದೆ,' ಎಂದು ಜಮ್ಮು ಮತ್ತು ಕಾಶ್ಮೀರ ರಾಜ್ಯದ ವಾರ್ತಾ ಮತ್ತು ಸಂಪರ್ಕ ಇಲಾಖೆ ಟ್ವೀಟ್ ಮೂಲಕ ತಿಳಿಸಿದೆ.
ಉಧಮಪುರ ಜಿಲ್ಲಾಡಳಿತವು ಎಲ್ಲ ಬಗೆಯ ಸಾರಿಗೆ ವ್ಯವಸ್ಥೆಯನ್ನು ರದ್ದುಗೊಳಿಸಿದೆ. ಹಾಗೆಯೇ ಜಮ್ಮುವಿನ ಬಾಗ್-ಎ-ಬಹು ಉದ್ಯಾನ ಮತ್ತು ಪೂಂಛ್ ಜಿಲ್ಲೆಯ ಎಲ್ಲ ಸಾರ್ವಜನಿಕ ಉದ್ಯಾನಗಳನ್ನು ಮುಂದಿನ ಆದೇಶದವರೆಗೆ ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.