ಉಧಂಪುರ (ಜಮ್ಮು ಕಾಶ್ಮೀರ): ಕಠಿಣ ಕೋವಿಡ್ ನಿಯಮಗಳನ್ನು ಅನುಸರಿಸುವುದರೊಂದಿಗೆ ಆಗಸ್ಟ್ 16ರಿಂದ ಮಾತಾ ವೈಷ್ಣೋದೇವಿ ಯಾತ್ರೆ ಶುರುವಾಗಲಿದೆ.
ಸೆಪ್ಟೆಂಬರ್ 30 ರವರೆಗೆ ಗರಿಷ್ಠ 5 ಸಾವಿರ ಭಕ್ತರಿಗೆ ವೈಷ್ಣೋದೇವಿ ಯಾತ್ರೆ ಮಾಡಲು ಅವಕಾಶವಿದೆ. ದೇಶದ ಇತರೆ ರಾಜ್ಯಗಳಿಂದ ಬರುವ ಭಕ್ತರು ಕೋವಿಡ್ ಬಗ್ಗೆ ಅಗತ್ಯ ಪರೀಕ್ಷೆ ಸೇರಿದಂತೆ ಕೆಲವು ನಿಯಮಗಳನ್ನು ಪಾಲಿಸಬೇಕು.
ಈ ಮಾರ್ಗಸೂಚಿಗಳನ್ನು ಅನುಸರಿಸಬೇಕು:
- 60 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ತೀರ್ಥಯಾತ್ರೆಗೆ ಹೋಗಲು ಅವಕಾಶವಿರುವುದಿಲ್ಲ.
- ಯಾತ್ರಿಕರು ಪರಸ್ಪರ 6 ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು. ಜೊತೆಗೆ ಮುಖಗವಸು ಧರಿಸಿರಬೇಕು.
- ಕೊರೊನಾದ ಯಾವುದೇ ಲಕ್ಷಣಗಳಿಲ್ಲದವರಿಗೆ ಮಾತ್ರ ಧಾರ್ಮಿಕ ಸ್ಥಳಗಳಿಗೆ ಹೋಗಲು ಸಾಧ್ಯ.
- ದೇಗುಲ ಪ್ರವೇಶಿಸುವ ಮೊದಲು ಕೈ, ಕಾಲುಗಳನ್ನು ಸೋಪ್ ಮತ್ತು ನೀರಿನಿಂದ ತೊಳೆಯಬೇಕು. ಸಂಬಂಧಿತ ಸಂಸ್ಥೆಗಳು ಈ ಸೌಲಭ್ಯವನ್ನು ಒದಗಿಸುತ್ತವೆ. ವಿಗ್ರಹಗಳು ಅಥವಾ ಧಾರ್ಮಿಕ ಪವಿತ್ರ ಗ್ರಂಥಗಳ ಸ್ಪರ್ಶಿಸಲು ಅನುಮತಿ ಇಲ್ಲ.