ಮುಜಫರ್ ನಗರ: ಉತ್ತರ ಪ್ರದೇಶದ ಮುಜಫರ್ ನಗರ ಜಿಲ್ಲೆಯಲ್ಲಿ 20 ವರ್ಷದ ಯುವಕನನ್ನು ಕತ್ತು ಹಿಸುಕಿ ಕೊಲೆಗೈದ ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಕೊಲೆಯಾದ ಯುವಕ ಶುಭಮ್ ಓರ್ವ ಬಾಲಕಿಯೊಂದಿಗೆ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ಇದಕ್ಕೆ ಬಾಲಕಿಯ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರು.
ಯುವಕನನ್ನು ಕೊಂದ ನಂತರ ಆರೋಪಿಗಳು ಶವವನ್ನು ಆತ್ಮಹತ್ಯೆ ಮಾಡಿಕೊಂಡವನಂತೆ ಬಿಂಬಿಸಲು ಮರಕ್ಕೆ ನೇಣು ಹಾಕಿದ್ದರು. ತಾವೇ ಪೊಲೀಸರಿಗೆ ಕರೆ ಮಾಡಿ ರಾಂಪುರ್ ಗ್ರಾಮದ ಹತ್ತಿರ ಮರದಲ್ಲಿ ಯಾರೋ ನೇಣು ಹಾಕಿಕೊಂಡಿದ್ದಾರೆ ಎಂದು ತಿಳಿಸಿದ್ದರು. ಈಗ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧನಕ್ಕೊಳಗಾದವರಲ್ಲಿ ಬಾಲಕಿಯ ಸಹೋದರ ಮತ್ತು ಆತನ ಸ್ನೇಹಿತ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಮೂರನೇ ಆರೋಪಿ ಆಗಿರುವ ಬಾಲಕಿಯ ತಂದೆ ಇನ್ನೂ ಪತ್ತೆಯಾಗಿಲ್ಲ.