ಕೋಝಿಕೋಡ್: ಕೇರಳದ ಕೋಝಿಕೋಡ್ ಜಿಲ್ಲೆಯ ಕೂಡತೈ ಗ್ರಾಮದಲ್ಲಿ ನಡೆದ ಆಘಾತಕಾರಿ ಪ್ರಕರಣವನ್ನು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿ ಮಹಿಳೆಯೊಬ್ಬಳು 14 ವರ್ಷಗಳ ಅವಧಿಯಲ್ಲಿ ಆಹಾರದಲ್ಲಿ ಸೈನೈಡ್ ಬೆರಿಸಿ ಪತಿ, ಅತ್ತೆ ಮತ್ತು ಕುಟುಂಬದ ಇತರೆ ನಾಲ್ವರು ಸದಸ್ಯರನ್ನು ಹತ್ಯೆ ಮಾಡಿದ್ದಾಳೆ.
47 ವರ್ಷದ ಜಾಲಿ ಜೋಸೆಫ್ ಎಂಬ ಮಹಿಳೆ ಹಾಗೂ ಇತರೆ ಇಬ್ಬರನ್ನು ಈ ಗಂಭೀರ ಪ್ರಕರಣದಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕೋಝಿಕೋಡ್ ಗ್ರಾಮೀಣ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಕೆ. ಜಿ ಸೈಮನ್, ಕೂಡತೈ ಗ್ರಾಮಕ್ಕೆ ಸೇರಿದ ಜಾಲಿ ಜೋಸೆಫ್ ಎಂಬ ಮಹಿಳೆ ಎಲ್ಲಾ ಆರು ಕೊಲೆಗಳನ್ನು ತಾನೇ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಅವಳ ಪತಿ ರಾಯ್ ಥಾಮಸ್ (40) ಬಳಿ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟ ದಾಖಲೆಗಳಿವೆ. 2011ರಲ್ಲಿ ನಡೆಸಿದ ಶವಪರೀಕ್ಷೆಯಿಂದ ನಮಗೆ ವೈಜ್ಞಾನಿಕ ಪುರಾವೆಗಳು ದೊರೆತಿವೆ ಎಂದು ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿಯು ಥಾಮಸ್ ದೇಹದಲ್ಲಿ ಸೈನೈಡ್ ಇರುವಿಕೆಯನ್ನು ಬಹಿರಂಗಪಡಿಸಿದೆ. ಕುಟುಂಬದ ಇತರೆ ಐವರು ಸಹ ಒಂದೇ ಮಾದರಿಯಲ್ಲಿ ಸಾವನ್ನಪ್ಪಿದ್ದಾರೆ ಎಂಬುದನ್ನು ನಾವು ತನಿಖೆಯಿಂದ ಕಂಡುಕೊಂಡಿದ್ದೇವೆ ಎಂದು ವಿವರಿಸಿದರು.