ಅಪ್ಘಾನಿಸ್ತಾನದ ಅಮೇರಿಕಾದ ವಿಶೇಷ ಸಾಮರಸ್ಯ ರಾಯಭಾರಿಯಾಗಿರುವ ಝಲ್‍ಮೆ ಖಾಲಿಲ್‍ಝಾಢ್ ನವದೆಹಲಿಗೆ ಕಡಿಮೆ ಅವಧಿಯ ತುರ್ತು ಭೇಟಿ ನೀಡಿದ ಬಳಿಕ, ಯುದ್ಧಗ್ರಸ್ತ ಅಘ್ಘಾನಿಸ್ತಾನದ ಆಂತರಿಕ ರಾಜಕೀಯ ವ್ಯವಸ್ಥೆಯಲ್ಲಿ ಭಾರತ ಮಹತ್ವದ ಪಾತ್ರ ವಹಿಸಬೇಕು ಎಂದು ಅಮೇರಿಕಾ ಬಯಸುತ್ತದೆ ಎಂದು ಮೂಲಗಳು ತಿಳಿಸಿವೆ.
"ಮಾತುಕತೆಗಳು ಅವಸರದ ಮಾದರಿಯದ್ದು. ಖಾಲಿಲ್‍ಝಾಡ್ ಅವರು ಮುಂದೊಮ್ಮೆ ಬರಬಹುದಿತ್ತು. ಆದರೆ ಕೆಲವೇ ಗಂಟೆಗಳ ಅವಧಿಯ ಮಾತುಕತೆಗೆ ಅವರು ಭಾರತದ ಭೇಟಿಗೆ ನಿರ್ಧರಿಸಿದರು," ಎಂದು ಮೂಲಗಳು ತಿಳಿಸಿವೆ. ಖಾಲಿಲ್‍ಝಾಡ್ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ವಿದೇಶಾಂಗ ಇಲಾಖಾ ಕಾರ್ಯದರ್ಶಿ ಹರ್ಷ ಶ್ರಿಂಗ್ಲ ಅವರನ್ನು ಗುರುವಾರ ನವದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಈವರೆಗೆ ಭಾರತ, ಯುದ್ಧಗ್ರಸ್ತ ಅಪ್ಘಾನಿಸ್ತಾನದಲ್ಲಿ ತಾಲಿಬಾನ್, ಪಾಕಿಸ್ತಾನದ ಜತೆಗೆ ಸಂಧಾನಕ್ಕೆ ಜತೆಗೆ ಅಲ್ಲಿನ ಆಂತರಿಕ ರಾಜಕೀಯದಲ್ಲಿ ಯಾವುದೇ ಪಾತ್ರ ವಹಿಸಲು ನಿರಾಕರಿಸಿತ್ತು. ಏಕೆಂದರೆ ಭಾರತದ ಅಧಿಕೃತ ನಿಲುವೆಂದರೆ, ಒಳ್ಳೆಯ ಹಾಗೂ ಕೆಟ್ಟ ತಾಲಿಬಾನ್‍ಗಳೆಂಬ ತಾರತಮ್ಯ ಇರಬಾರದು. ಆದರೆ ಭಾರತದ ನಿಲುವಿನಲ್ಲಿ ಬಹುಮುಖ್ಯ ಬದಲಾವಣೆಯ ಸೂಚಕವೆಂಬಂತೆ, ತಾಲಿಬಾನ್ ಸೇರಿದಂತೆ ಅಪ್ಘಾನಿಸ್ತಾನದ ಆಂತರಿಕ ರಾಜಕೀಯ ಬೆಳವಣಿಗೆಯನ್ನು ಭಾರತ ಸೂಕ್ಷ್ಮವಾಗಿ ಅನುಸರಿಸಬೇಕು ಎಂದು ಅಮೇರಿಕಾ ಬಯಸುತ್ತಿದೆ ಎಂದು ಮೂಲಗಳು ತಿಳಿಸಿವೆ.
"ಖಾಲಿಲ್‍ಝಾಡ್ ಹಾಗೂ ಭಾರತದ ವಿದೇಶಾಂಗ ಸಚಿವರ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರ ನಡುವೆ ಮಾತುತಕೆ ಸಂದರ್ಭದಲ್ಲಿ ಅಪ್ಘಾನಿಸ್ತಾನದ ಸಂಪೂರ್ಣ ಬೆಳವಣಿಗೆಗಳು, ಭದ್ರತೆ, ಅಮೇರಿಕಾ-ತಾಲಿಬಾನ್ ನಡುವಣ ಮಾತುಕತೆ, ಅಪ್ಘಾನಿಸ್ತಾನದ ನಾನಾ ಗುಂಪುಗಳಿಗೆ ಅಧಿಕಾರದಲ್ಲಿ ಅವಕಾಶ ಒದಗಿಸಲು ನಾನಾ ಸೂತ್ರಗಳ ಬಗ್ಗೆ ಚರ್ಚೆ ನಡೆಯಿತು," ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಖಾಲಿಲ್‍ಝಾಡ್ ಜತೆಗೆ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಾಷ್ಟ್ರೀಯ ಸುರಕ್ಷತಾ ಸಮಿತಿಯ ಹಿರಿಯ ನಿರ್ದೇಶಕ ಲಿಸಾ ಕರ್ಟಿಸ್ ಕೂಡಾ ಇದ್ದರು. ಅವರು ದೋಹಾದಲ್ಲಿ ಮುಲ್ಲಾ ಬರಾದರ್ ಹಾಗೂ ಅವರ ತಂಡವನ್ನು ಭೇಟಿ ಮಾಡಿದ್ದರು. ಬಳಿಕ ಅವರು ಪಾಕಿಸ್ತಾನ ರಾಜಧಾನಿ ಇಸ್ಲಮಾಬಾದ್‍ಗೆ ತೆರಳಿದರು.
ತಾಲಿಬಾನ್ ಜತೆಗಿನ ಮಾತುಕತೆ ವಿಫಲವಾಗುತ್ತಿದ್ದರೂ, ಟ್ರಂಪ್ ಆಡಳಿತ ಅಪ್ಘಾನಿಸ್ತಾನದ ನಾನಾ ಗುಂಪುಗಳ ಜತೆಗಿನ ಮಾತುಕತೆಗಳನ್ನು ಕೂಡಲೇ ಆರಂಭಿಸಿ, ಅದನ್ನು ತ್ವರಿತಗತಿಯಲ್ಲಿ ಕೊಂಡೊಯ್ಯಲು ಬಯಸುತ್ತಿದೆ. ಈ ನಡುವೆ ತಾಲಿಬಾನ್ ಅಪ್ಘಾನ್ ಸರ್ಕಾರ, ಅಲ್ಲಿನ ರಕ್ಷಣಾ ಪಡೆಗಳ ಮೇಲಿನ ದಾಳಿಯನ್ನು ಮುಂದುವರಿಸಿದೆ. ಅಘ್ಘಾನ್ ಸರ್ಕಾರ ಈ ಎಲ್ಲದರ ನಡುವೆ, ವಿಶ್ವದ ಎಲ್ಲಾ ರಾಷ್ಟ್ರಗಳಂತೆ, ಕೋವಿಡ್ 19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿದೆ. ಖಾಲಿಲ್‍ಝಾಡ್ ಅವರು ಭಾರತದ ಮಧ್ಯಸ್ಥಿಕೆದಾರರ ಜತೆಗಿನ ಮಾತುಕತೆ ಸಂದರ್ಭದಲ್ಲಿ ಭಯೋತ್ಪಾದನೆ, ಹೆಚ್ಚುತ್ತಿರುವ ತಾಲಿಬಾನ್ ಆಕ್ರಮಣಗಳು, ಇವೆಲ್ಲವುಗಳು ಅಲ್ಲಿನ ಪ್ರಜಾಪ್ರಭುತ್ವ ಸರ್ಕಾರದ ಮೇಲೆ ಬೀರುತ್ತಿರುವ ಒತ್ತಡಗಳು, ಅನಿಶ್ಚಿತತೆಯ ಭಯ, ಅಲ್ಲಿನ ಸರ್ಕಾರ, ಸೇನೆ ಹಾಗೂ ಸಮಾಜದ ಬಗ್ಗೆ ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.
ಅಫ್ಘಾನಿಸ್ತಾನದ ವಿಷಯದಲ್ಲಿ ಭಾರತ ಬಹುದೊಡ್ಡ ಶಕ್ತಿ ಎಂದು ತಿಳಿಸಿರುವ ಅಮೆರಿಕ, ಅಲ್ಲಿ ಶಾಂತಿ ಪುನರ್ ಸ್ಥಾಪಿಸಲು ಹಾಗೂ ಸೌಹಾರ್ಧತೆ ಮೂಡಿಸುವಲ್ಲಿ ಭಾರತ ವಹಿಸಿದ ರಚನಾತ್ಮಕ ಪಾತ್ರ ವಹಿಸಿದೆ ಎಂದು ತಿಳಿಸಿದೆ. ಭಾರತ ಪರಿಣಾಮಕಾರಿ ಕೊಡುಗೆ ನೀಡಬೇಕಾದರೆ ಇಡೀ ಪ್ರಕ್ರಿಯೆಯ ಭಾಗವಾಗಿರಬೇಕು ಎಂದು ಅಮೆರಿಕ ಬಯಸುತ್ತಿದೆ. ಏಕೆಂದರೆ ಅಫ್ಘಾನಿಸ್ತಾನದ ಅಧ್ಯಕ್ಷ ಆಶ್ರಫ್ ಘನಿ ಜತೆಗೆ ಭಾರತ ಅತ್ಯಂತ ಸ್ನೇಹಮಯಿಯಾಗಿದ್ದು, ಇದನ್ನು ಬಳಸಿಕೊಳ್ಳಲು ಅಮೆರಿಕ ಇಚ್ಛಿಸಿದೆ.
ಗುರುವಾರದ ಮಾತುಕತೆ ಸಂದರ್ಭದಲ್ಲಿ ಇತ್ತೀಚಿಗೆ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‍ನಲ್ಲಿ 25 ಮಂದಿಯನ್ನು ಬಲಿತೆಗೆದುಕೊಂಡ ಗುರುದ್ವಾರದ ದಾಳಿ, ಅಲ್ಲಿ ನೆಲೆಸಿರುವ ಹಿಂದೂಗಳು ಹಾಗೂ ಸಿಖ್ಖರ ದುರವಸ್ತೆ ಬಗ್ಗೆ ಉಭಯ ಬಣಗಳೂ ಚರ್ಚಿಸಿದವು. ಮಹತ್ವದ ಅಂಶವೆಂದರೆ ಖಾಲಿಲ್‍ಝಾಡ್ ಭೇಟಿಯ ಒಂದು ದಿನಗಳ ಬಳಿಕ, ಬೀಜಿಂಗ್‍ನಲ್ಲಿ ಭಾರತದ ರಾಯಭಾರಿಯಾಗಿರುವ ವಿಕ್ರಮ್ ಮಿಸ್ರಿ ಅವರು ಅಘ್ಘಾನಿಸ್ತಾನದ ಚೀನಾದ ವಿಶೇಷ ಪ್ರತಿನಿಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
"ಮಾಸ್ಕ್ ಜೊತೆಗೆ ಕೂಡಾ ರಾಜತಾಂತ್ರಿಕತೆ ಮುಂದುವರಿಯಲೇಬೇಕು. ರಾಯಭಾರಿ ಲಿಯು ಜಿಯಾನ್ ಜೊತೆಗೆ ಎರಡೂ ದೇಶಗಳಿಗೆ ಅತ್ಯಂತ ಮಹತ್ವದ್ದಾಗಿರುವ ವಿಷಯದ ಬಗ್ಗೆ ಒಳ್ಳೆಯ ಮಾತುಕತೆ ಬಳಿಕ ಉತ್ಸಹಿತನಾಗಿದ್ದೇನೆ," ಎಂದು ಮಿಸ್ರಿ ಟ್ವೀಟ್ ಮಾಡಿದ್ದಾರೆ.
ಈ ನಡುವೆ, ಕೋವಿಡ್ 19 ಸಾಂಕ್ರಾಮಿಕ ರೋಗದ ಹಾವಳಿ ಹಾಗೂ ವಿಶ್ವಾದ್ಯಂತ ಲಾಕ್‍ಡೌನ್ ನಡುವೆಯೂ, ಛಾಬಹಾರ್ ಬಂದರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದು ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವುಗಳನ್ನು ನಿರಂತರವಾಗಿ ಪೂರೈಸಲು ಭಾರತಕ್ಕೆ ನೆರವಾಗುತ್ತಿದೆ. ಭಾರತ ಅಫ್ಘಾನಿಸ್ತಾನಕ್ಕೆ 75,000 ಟನ್ ಗೋಧಿಯನ್ನು ಇರಾನ್‍ನ ಛಬಹಾರ್ ಬಂದರು ಮೂಲಕ ಸಾಗಾಣೆ ಮಾಡುತ್ತಿದ್ದು, ಈ ಪೈಕಿ ಈಗಾಗಲೆ 10,000 ಟನ್‍ಗಳನ್ನು ಕಳೆದ ತಿಂಗಳು ಪೂರೈಕೆ ಮಾಡಲಾಗಿದೆ ಹಾಗೂ ಗುರುವಾರ 10,000 ಟನ್‍ಗಳನ್ನು ಕಳುಹಿಸಿಕೊಡಲಾಯಿತು ಎಂದು ಮೂಲಗಳು ತಿಳಿಸಿವೆ. ಇದರ ಜತೆಗೆ ಭಾರತ ಚಹಾ ಹಾಗೂ ಸಕ್ಕರೆಯನ್ನು ಕೂಡಾ ಅಫ್ಘಾನಿಸ್ತಾನಕ್ಕೆ ಕಳುಹಿಸಿಕೊಡಲು ಪ್ರಯತ್ನಿಸುತ್ತಿದ್ದು, ಛಾಬಹಾರ್ ಬಂದರು ಈ ನಿಟ್ಟಿನಲ್ಲಿ ಭಾರತಕ್ಕೆ ದೊಡ್ಡ ಮಟ್ಟದಲ್ಲಿ ಅನುಕೂಲಕರವಾಗಿ ಪರಿಣಮಿಸಿದೆ ಎಂದು ಮೂಲಗಳು ಒತ್ತಿ ಹೇಳಿವೆ.