ಪ್ಯಾರಿಸ್( ಫ್ರಾನ್ಸ್): ಅಮೆರಿಕ ಹಾಗೂ ಇರಾನ್ ದೇಶಗಳು ತಮ್ಮ ದೇಶಗಳ ಜಾಗತಿಕ ಪರಂಪರೆಯ ತಾಣಗಳನ್ನು ರಕ್ಷಿಸಬೇಕು ಎಂದು ವಿಶ್ವಸಂಸ್ಥೆಯ ಯುನೆಸ್ಕೋ ಒತ್ತಾಯಿಸಿದೆ. ಯಾವುದೇ ಕಾರಣಕ್ಕೂ ಕೂಡಾ ಅವುಗಳಿಗೆ ಹಾನಿ ಮಾಡಬಾರದೆಂದು ಮನವಿ ಮಾಡಿಕೊಂಡಿದೆ. ಇರಾನ್ ಅಮೆರಿಕದ ಯಾವುದೇ ಪ್ರದೇಶದ ಮೇಲೆ ದಾಳಿ ಮಾಡಿದರೆ ಅದಕ್ಕೆ ಪ್ರತಿದಾಳಿ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಯುನೆಸ್ಕೋ ಈ ರೀತಿಯ ಮನವಿ ಮಾಡಿಕೊಂಡಿದೆ.
''ಶಾಂತಿಯುತ ಮಾತುಕತೆ ನಡೆಸಿ ವಿಶ್ವ ಪರಂಪರೆಯ ತಾಣಗಳನ್ನು ರಕ್ಷಿಸಿ'': ಯುನೆಸ್ಕೋ
ಅಮೆರಿಕ ಹಾಗೂ ಇರಾನ್ ನಡುವಿನ ಬಿಕ್ಕಟ್ಟಿನಿಂದ ವಿಶ್ವದಾದ್ಯಂತ ಆತಂಕ ಶುರುವಾಗಿದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ವಿಶ್ವದ ಎಲ್ಲಾ ರಾಷ್ಟ್ರಗಳ ಮೇಲೆ ಪರಿಣಾಮ ಬೀರಬಲ್ಲ ಈ ಬಿಕ್ಕಟ್ಟು ಯುನೆಸ್ಕೋಗೆ ಕೂಡಾ ತಲೆನೋವಾಗಿ ಪರಿಣಮಿಸಿದೆ.
ಯುನೆಸ್ಕೋದ ಡೈರೆಕ್ಟರ್ ಜನರಲ್ ಆಡ್ರೆ ಅಜೌಲೆ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ರಾಯಭಾರಿ ಅಹ್ಮದ್ ಜಲಾಲಿಯನ್ನು ಭೇಟಿಯಾಗಿ ಮಧ್ಯಪ್ರಾಚ್ಯದ ಬಿಕ್ಕಟ್ಟಿನ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಯುನೆಸ್ಕೋ ಡೈರೆಕ್ಟರ್ ಜನರಲ್ ಆಡ್ರೆ ಅಜೌಲೆ '' ಎರಡು ರಾಷ್ಟ್ರಗಳ ನಡುವೆ ಶಾಂತಿಯುತ ಮಾತುಕತೆ ನಡೆದು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಹಾಗೂ ಅಲ್ಲಿನ ಸಾಂಸ್ಕೃತಿಕ ಹಾಗೂ ನೈಸರ್ಗಿಕ ತಾಣಗಳನ್ನು ರಕ್ಷಿಸಬೇಕು'' ಎಂದು ಒತ್ತಾಯಿಸಿದ್ದಾರೆ. ಜೊತೆಗೆ '' ವಿಶ್ವದ ಪ್ರಸಿದ್ಧ ತಾಣಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸುವುದು ಅಂತಾರಾಷ್ಟ್ರೀಯ ಸಮುದಾಯಗಳ ಕರ್ತವ್ಯ '' ಎಂದು ಮನವಿ ಮಾಡಿದ್ದಾರೆ.
ಇರಾನ್ ಹಿರಿಯ ಮಿಲಿಟರಿ ಕಮಾಂಡರ್ ಕ್ವಾಸ್ಸೆಂ ಸೊಲೈಮಾನಿಯನ್ನು ಅಮೆರಿಕ ಕೊಂದ ಮೇಲೆ ಮಧ್ಯಪ್ರಾಚ್ಯ ಬಿಕ್ಕಟ್ಟು ತಲೆದೂರಿತ್ತು. ಇರಾನ್ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಅಮೆರಿಕಾಗೆ ಬೆದರಿಕೆ ಹಾಕಿತ್ತು. ಇದಿಷ್ಟು ಮಾತ್ರವಲ್ಲದೇ ಅಮೆರಿಕಾ ಸೇನೆ ಇರಾಕ್ನಲ್ಲಿ ಬೀಡುಬಿಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅಮೆರಿಕಾ ಮಿಲಿಟರಿ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಇಂಥಹ ಯಾವುದೇ ನಿರ್ಣಯವನ್ನು ತೆಗೆದುಕೊಂಡಿಲ್ಲ ಎಂದು ಹೇಳಿ ಮಧ್ಯಪ್ರಾಚ್ಯ ಬಿಕ್ಕಟ್ಟು ಮತ್ತಷ್ಟು ಬಿಗುವಾಗುವಂತೆ ಮಾಡಿದ್ದಾರೆ.ಇದರಿಂದಾಗಿ ಇರಾಕ್ನ ನೆರೆ ರಾಷ್ಟ್ರ ಇರಾನ್ನಲ್ಲೂ ಅಸಮಾಧಾನ ಹೊಗೆಯಾಡುತ್ತಿದೆ