ನವದೆಹಲಿ:ದುಬೈನಿಂದ 191 ಪ್ರಯಾಣಿಕರನ್ನು ಹೊತ್ತು ಬಂದಿದ್ದ ಏರ್ ಇಂಡಿಯಾ ಏಕ್ಸ್ಪ್ರೆಸ್ ವಿಮಾನ ಕೇರಳದ ಕೋಯಿಕ್ಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾದ ಬಳಿಕ ನಾಗರಿಕ ವಿಮಾನಯಾನ ಸಚಿವಾಲಯ ತುರ್ತು ಸಭೆ ಕರೆದಿದ್ದು, ಅವಘಡದ ತನಿಖೆಗೆ ಎರಡು ತಂಡ ರಚಿಸಿದೆ.
ದೆಹಲಿಯ ನಾಗರಿಕ ವಿಮಾನಯಾನ ಸಚಿವಾಲಯದ ರಾಜೀವ್ ಗಾಂಧಿ ಭವನದಲ್ಲಿ ತುರ್ತು ಸಭೆ ನಡೆಯುತ್ತಿದೆ. ಡಿಜಿಸಿಎ ಮಹಾನಿರ್ದೇಶಕರು ಮತ್ತು ಸಚಿವಾಲಯದ ಅಧಿಕಾರಿಗಳು, ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಏರ್ ಇಂಡಿಯಾ, ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಮತ್ತು ಎಎಐಬಿಯ ವೃತ್ತಿಪರರ 2 ತನಿಖಾ ತಂಡಗಳನ್ನು ವಿಮಾನ ಪತನಕ್ಕೆ ಕಾರಣ ಏನು ಎಂಬದನ್ನು ಪತ್ತೆಹಚ್ಚಲು ನಿಯೋಜಿಸಲಾಗಿದೆ. ಪ್ರಯಾಣಿಕರ ರಕ್ಷಣಾ ಕಾರ್ಯಾಚರಣೆ ಈಗ ಪೂರ್ಣಗೊಂಡಿದೆ. ಗಾಯಾಳುಗಳು ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಇತ್ತೀಚಿನ ಮಾಹಿತಿಯ ಪ್ರಕಾರ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಗಿದಿದೆ ಮತ್ತು ಗಾಯಗೊಂಡ ಎಲ್ಲರನ್ನು ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಏರ್ ಇಂಡಿಯಾ ದುಬೈ ಸಹಾಯವಾಣಿ 97142079444 ಅನ್ನು ತೆರಿದೆ. ಸಿಜಿಐ ದುಬೈ ಕೂಡ ಮೃತ ಪ್ರಯಾಣಿಕರಿಗೆ ತೀವ್ರ ಸಂತಾಪ ಸೂಚಿಸಿದೆ.
ಇನ್ನು ವಿಮಾನ ಅಪಘಾತದ ಕುರಿತು ಪ್ರಯಾಣಿಕರ ಸಂಬಂಧಿಕರು ಮಾಹಿತಿ ಪಡೆಯಲು ವಿದೇಶಾಂಗ ಇಲಾಖೆ ಹೆಲ್ಪ್‌ಲೈನ್ ನಂಬರ್ ಬಿಡುಗಡೆ ಮಾಡಿದೆ.
ದೂರವಾಣಿ ಸಂಖ್ಯೆ 1800 118 797