ಲಖನೌ(ಉತ್ತರ ಪ್ರದೇಶ):ಮೀರತ್‌ನಲ್ಲಿ ಇಪ್ಪತ್ನಾಲ್ಕು, ಆಗ್ರಾದಲ್ಲಿ ಇಪ್ಪತ್ತೆಂಟು ಮತ್ತು ಲಖನೌದಲ್ಲಿ ನಾಲ್ಕು ತರಕಾರಿ ಮಾರಾಟಗಾರರು ಕೊರೊನಾ ವೈರಸ್‌ಗೆ ಟಾರ್ಗೆಟ್ ಆಗಿದ್ದಾರೆ. ಕಳೆದ 24 ಗಂಟೆಗಳಲ್ಲಿ, ಸಗಟು ತರಕಾರಿ ಮಾರುಕಟ್ಟೆಯು ಹಾಟ್‌ಸ್ಪಾಟ್ ಆಗಿ ಹೊರಹೊಮ್ಮಿದೆ.
ಕಳೆದ ಎರಡು ದಿನಗಳಿಂದ ಈ ಮಾರುಕಟ್ಟೆ ಸೀಲ್ ಮಾಡಲಾಗಿದ್ದು, ಮೀರತ್‌ನಲ್ಲಿನ ಚಿಲ್ಲರೆ ವ್ಯಾಪಾರಿಗಳಿಗೆ ಮತ್ತು ಸಣ್ಣ ಅಂಗಡಿ ಮಾಲೀಕರಿಗೆ ತರಕಾರಿಗಳನ್ನು ಈ ಮಾರುಕಟ್ಟೆಯಿಂದಲೇ ಪೂರೈಕೆ ಮಾಡಲಾಗುತ್ತಿತ್ತು.
ಒಂದೇ ದಿನದಲ್ಲಿ ಆದ ಬೆಳವಣಿಗೆ ಕಂಡು ವೈದ್ಯರು ಕಳವಳ ವ್ಯಕ್ತಪಡಿಸಿದ್ದು, ಈ ಮಾರುಕಟ್ಟೆಯಲ್ಲಿನ ರೋಗಿಗಳೊಂದಿಗೆ ಸಂಪರ್ಕ ಹೊಂದಿದ್ದ ಇತರರನ್ನು ಪತ್ತೆ ಹಚ್ಚುವಂತೆ ಹೇಳಿದ್ದಾರೆ.
ಈಗಾಗಲೇ ತರಕಾರಿ ಮಾರುಕಟ್ಟೆಯಲ್ಲಿ ಕೊರೊನಾ ತೀವ್ರವಾಗಿ ವ್ಯಾಪಿಸಿದ್ದು, ತರಕಾರಿಗಳನ್ನು ಖರೀದಿಸುವಾಗ ಎಚ್ಚರಿಕೆ ವಹಿಸುವಂತೆ ಗ್ರಾಹಕರಿಗೆ ಸೂಚನೆ ನೀಡಲಾಗಿದೆ.
ಆಗ್ರಾದಲ್ಲಿ, ಕಳೆದ ಒಂದು ವಾರದಲ್ಲಿ 28 ತರಕಾರಿ ಮಾರಾಟಗಾರರು ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ. ಈ ಮಾರಾಟಗಾರರೊಂದಿಗೆ ಸಂಪರ್ಕ ಹೊಂದಿದವರನ್ನು ಪತ್ತೆಹಚ್ಚಲು ಆರೋಗ್ಯ ಇಲಾಖೆ ಶತಾಯಗತಾಯು ಪ್ರಯತ್ನಿಸುತ್ತಿದ್ದು, ಇನ್ನೂ ಕೂಡ ಸರಿಯಾದ ಮಾಹಿತಿ ದೊರೆತಿಲ್ಲ.
ಇನ್ನು ಈ ಬಗ್ಗೆ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಬಾಬ್ಲೂ ಕುಮಾರ್ ಪ್ರತಿಕ್ರಿಯಿಸಿದ್ದು, ಸೋಂಕಿತ ತರಕಾರಿ ಮಾರಾಟಗಾರರಲ್ಲಿ ಹೆಚ್ಚಿನವರು ಬಸಾಯಿ ಮತ್ತು ತಾಜ್‌ಗಂಜ್ ಮೂಲದ ಮಾರುಕಟ್ಟೆಗಳಿಂದ ಬಂದವರು. ಈ ತರಕಾರಿ ಮಾರಾಟಗಾರರೊಂದಿಗೆ ಸಂಪರ್ಕ ಹೊಂದಿದ್ದ ಜನರನ್ನು ಈಗಾಗಲೇ ಕ್ವಾರಂಟೈನ್ನಲ್ಲಿ ಇಡಲಾಗಿದೆ ಹಾಗೂ ಕಂಟೇನ್ಮೆಂಟ್ ಝೋನ್ಗಳಲ್ಲಿ ಪ್ಯಾಕ್ ಮಾಡಿದ ತರಕಾರಿಗಳನ್ನು ಮನೆ ಬಾಗಿಲಿಗೆ ವಿತರಿಸುವ ಕಾರ್ಯ ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ.