ಅಹ್ಮದಾಬಾದ್ (ಉತ್ತರಪ್ರದೇಶ) :ತಬ್ಲಿಘಿ ಜಮಾತ್ ಸದಸ್ಯರನ್ನು ಪತ್ತೆಹಚ್ಚಲು ಸಹಾಯ ಮಾಡಿದವರಿಗೆ ಬಹುಮಾನ ನೀಡಲಾಗುವುದು ಎಂದು ಯುಪಿ ಪೊಲೀಸರು ಘೋಷಿಸಿದ್ದಾರೆ. ತಬ್ಲಿಘಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವವರಿಗೆ 5,000 ರೂ. ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಕೊರೊನಾ ವೈರಸ್ ವಿರುದ್ಧ ಹೋರಾಡಲು ಸರ್ಕಾರ ವಿಧಿಸಿರುವ ಸಾಮಾಜಿಕ ಅಂತರ ಪ್ರೋಟೋಕಾಲ್ ನಿಯಮವನ್ನೂ ಮೀರಿ ಹಲವರು ನಿಜಾಮುದ್ದೀನ್‌ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದರು.
ಇಲ್ಲಿಯ ವಿವಿಧ ಮಸೀದಿಗಳು, ಮದರಸಾಗಳು ಮತ್ತು ಮನೆಗಳಲ್ಲಿ ತಂಗಿದ್ದ 33 ಜಮಾತ್ ಸದಸ್ಯರನ್ನು ಪೊಲೀಸರು ಈವರೆಗೆ ಬಂಧಿಸಿದ್ದಾರೆ.
ಇನ್ನೂ ಹಲವು ಜಮಾತ್ ಸದಸ್ಯರು ತಲೆಮರೆಸಿಕೊಂಡಿದ್ದಾರೆ. ಅವರು ಬಂದು ಅಧಿಕಾರಿಗಳ ಮುಂದೆ ಹಾಜರಾದರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಆದರೆ, ಅವರ ಬಗ್ಗೆ ಮಾಹಿತಿ ಬೇರೆ ಮೂಲದ ಮೂಲಕ ಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ತ್ರಿವೇಣಿ ಸಿಂಗ್ ವಾರ್ನ್ ಮಾಡಿದ್ದಾರೆ.
ತಬ್ಲಿಘಿ ಜಮಾತ್ ಸದಸ್ಯರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವವರಿಗೆ 5,000 ರೂಪಾಯಿ ನಗದು ಬಹುಮಾನ ನೀಡಲಾಗುವುದು ಮತ್ತು ಅವರ ಗುರುತನ್ನು ರಹಸ್ಯವಾಗಿಡಲಾಗುವುದು ಎಂದು ಸಿಂಗ್ ಘೋಷಿಸಿದರು.
ಅಹ್ಮದಾಬಾದ್ನಲ್ಲಿ ಇದುವರೆಗೆ ನಾಲ್ಕು ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಇವರೆಲ್ಲರೂ ತಬ್ಲಿಘಿ ಜಮಾತ್ ಸದಸ್ಯರೊಂದಿಗೆ ಸಂಬಂಧ ಹೊಂದಿದವರಾಗಿದ್ದಾರೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಎನ್.ಪಿ ಸಿಂಗ್ ಮಾತನಾಡಿ, ಇಲ್ಲಿ ಮುಬಾರಕ್ಪುರ್ ಪ್ರದೇಶವನ್ನು ಹಾಟ್ಸ್ಪಾಟ್ ಎಂದು ಘೋಷಿಸಲಾಗಿದೆ. ಅದನ್ನು ಮೊಹರು ಮಾಡಲಾಗಿದೆ. ಮೂರು ರೋಗಿಗಳ ಎರಡನೇ ಪರೀಕ್ಷೆಯು ನಕಾರಾತ್ಮಕವಾಗಿದ್ದರೂ ನಾಲ್ಕು ಕೋವಿಡ್ -19 ರೋಗಿಗಳು ಇಲ್ಲಿ ಪತ್ತೆಯಾಗಿದ್ದಾರೆ ಎಂದು ಹೇಳಿದರು.