ಆಗ್ರಾ (ಉತ್ತರ ಪ್ರದೇಶ): ಜಿಲ್ಲೆಯಲ್ಲಿ ಕೋವಿಡ್-19 ಎಂಬ ವಿಷ ವರ್ತುಲಕ್ಕೆ ಸಿಲುಕಿದ ಬಡ ಕುಟುಂಬವೊಂದು ಐದು ವರ್ಷದ ಹಸುಳೆಯನ್ನು ಕಳೆದುಕೊಂಡಿದೆ. ಹಸಿವು ತಾಳಲಾರದೇ ಮಗು ಮೃತಪಟ್ಟಿದೆ ಎನ್ನಲಾಗುತ್ತಿದೆ.
ಕೊರೊನಾ ಹಿನ್ನೆಲೆ ಜಿಲ್ಲೆಯಲ್ಲಿ ಹಲವು ದಿನಗಳ ಕಾಲ ಲಾಕ್ಡೌನ್ ಹೇರಲಾಗಿತ್ತು. ಹಾಗಾಗಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಕುಟುಂಬವನ್ನು ಕೊರೊನಾ ಹೈರಾಣಾಗಿಸಿದೆ. ಯಾವುದೇ ಆದಾಯದ ಮೂಲವಿರದ ಕಾರಣ ಮಗು ಮೃತಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ.
ನೈನಾನಾ ಜಾಟ್ ಪಂಚಾಯತ್ನ ನಾಗಲಾ ವಿಧಿ ಚಂದ್ನ ಪಪ್ಪು ಸಿಂಗ್ ಹಾಗೂ ಶೀಲಾ ದೇವಿ ಎಂಬ ದಂಪತಿಯ ಐದು ವರ್ಷದ ಮಗುವೇ ಇದೀಗ ಹಸಿವಿನಿಂದ ಕೊನೆಯುಸಿರೆಳೆದಿದೆ. ಲಾಕ್ಡೌನ್ ವೇಳೆ ಕೆಲಸವಿಲ್ಲದೆ ಮನೆಯಲ್ಲಿದ್ದ ಈ ಕುಟುಂಬಕ್ಕೆ ಸ್ಥಳೀಯರು ಹಲವು ದಿನಗಳ ಕಾಲ ರೇಷನ್ ನೀಡಿದ್ದರು. ಆದರೆ, ಬಳಿಕ ಯಾರೂ ಸಹಾಯ ಹಸ್ತ ನೀಡಲು ಮುಂದೆ ಬಂದಿರಲಿಲ್ಲ. ಇದರಿಂದ ಬಡ ಕಟುಂಬ ಕಷ್ಟದಲ್ಲಿಯೇ ದಿನ ದೂಡುತ್ತಿತ್ತು.
'ಪತಿಯ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ನಾನೇ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾಯಿತು. ನಮಗೆ ಮೂವರು ಮಕ್ಕಳಿದ್ದುದರಿಂದ ಓರ್ವಳಿಂದ ಕುಟುಂಬ ಸಾಗಿಸಲು ಕಷ್ಟವಾಗುತ್ತಿತ್ತು. ಈ ನಡುವೆ ನನ್ನ ಮಗಳು ಅನಾರೋಗ್ಯಕ್ಕೆ ತುತ್ತಾದಳು. ಆಹಾರವಿರಲಿ, ಅವಳಿಗೆ ಬೇಕಾದ ಔಷಧಿಯನ್ನು ಖರೀದಿಸಲು ಸಹ ನಮ್ಮ ಬಳಿ ಹಣವಿರಲಿಲ್ಲ' ಎಂದು ಮಗಳನ್ನು ಕಳೆದುಕೊಂಡ ತಾಯಿ ಶೀಲಾ ದೇವಿ ತನ್ನ ಕಷ್ಟ ಹೇಳಿಕೊಂಡಿದ್ದಾರೆ.
ಮಗುವಿನ ಸಾವಿನ ನಂತರ ನೆರೆಹೊರೆಯವರು ಕುಟುಂಬಕ್ಕೆ ಸ್ವಲ್ಪ ಆಹಾರವನ್ನು ಖರೀದಿಸಲು ಹಣ ಸಂಗ್ರಹಿಸಿ ಕೊಟ್ಟಿದ್ದಾರೆ. ಆದರೆ, ಕುಟುಂಬಕ್ಕೆ ಪಡಿತರ ಚೀಟಿ ಇರಲಿಲ್ಲ. ಸ್ಥಳೀಯ ಅಧಿಕಾರಿಗಳು ಅವರಿಗೆ ಪಡಿತರ ಚೀಟಿ ಪಡೆಯಲು ಯಾವುದೇ ಸಹಾಯ ಮಾಡಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.