ಭಾಗ್ಪತ್(ಉತ್ತರ ಪ್ರದೇಶ):40,000 ರೂ. ಆಸ್ಪತ್ರೆ ಬಿಲ್ ಕಟ್ಟಿಲ್ಲ ಎಂಬ ಕಾರಣಕ್ಕೆ ಉತ್ತರ ಪ್ರದೇಶದ ಭಾಗಪತ್ನಲ್ಲಿರುವ ಉಷಾ ನರ್ಸಿಂಗ್ ಹೋಂನ ವೈದ್ಯರು ತಮ್ಮ ಮಗುವನ್ನು ಅಡವಿಟ್ಟುಕೊಂಡಿದ್ದಾರೆ ಎಂದು ದಂಪತಿ ಆರೋಪಿಸಿದ್ದಾರೆ.
ವೈದ್ಯರು ತಮ್ಮ ಮಗುವನ್ನು ಅಡವಿಟ್ಟುಕೊಂಡಿದ್ದಾರೆ ಎಂದು ದಂಪತಿ ಆರೋಪ 2018ರ ಸೆಪ್ಟಂಬರ್ನಲ್ಲಿ ನಾನು ಉಷಾ ನರ್ಸಿಂಗ್ ಹೋಂನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದೆ. ಹೆರಿಗೆ ಬಳಿಕ ಆಸ್ಪತ್ರೆಯವರು 40,000 ರೂ. ಬಿಲ್ ನೀಡಿದ್ದರು. ಆದರೆ ಆಗ ಅಷ್ಟೊಂದು ಬಿಲ್ ಕಟ್ಟಲು ನಮ್ಮ ಬಳಿ ಹಣ ಇರಲಿಲ್ಲ. ಇದಕ್ಕೆ ಪರಿಹಾರವೊಂದನ್ನು ನೀಡಿದ ವೈದ್ಯರು, ಪೂರ್ತಿ ಹಣ ನೀಡುವವರೆಗೂ ನಿಮ್ಮ ಮಗುವನ್ನ ನಾವು ಅಡವಿಟ್ಟುಕೊಳ್ಳುತ್ತೇವೆ ಎಂದು ತಿಳಿಸಿದ್ದರು. ಆ ಸಮಯಕ್ಕೆ ದಾರಿ ತೋರದೆ ನಾವು ಇದಕ್ಕೆ ಒಪ್ಪಿದ್ದೆವು ಎಂದು ಮಗುವಿನ ತಾಯಿ ಶಿಕ್ಷಾ ಹೇಳಿದ್ದಾರೆ.
ಕಂತು ಕಂತಿನಲ್ಲಿ ಹಣ ನೀಡುತ್ತಾ ಇದೀಗ ನಾವು 30,000 ರೂ. ಕಟ್ಟಿದ್ದು, ಈಗಲಾದರೂ ನಮ್ಮ ಮಗುವನ್ನು ನಮಗೆ ನೀಡಿ ಎಂದು ಕೇಳಲು ಹೋದರೆ ಮಗುವನ್ನ ಕೊಡದೆ ನಮ್ಮನ್ನ ಹೊರಗೆ ಓಡಿಸಿದ್ದಾರೆ ಎಂದು ಮಗುವಿನ ತಂದೆ ಮೊಹರ್ ಸಿಂಗ್ ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಎಸ್ಪಿ ಅನಿಲ್ ಕುಮಾರ್ ಸಿಂಗ್, ದಂಪತಿಯು ತಮ್ಮ ಮಗುವನ್ನು ಮುಜಾಫರ್ನಗರದಲ್ಲಿ ಮಾರಾಟ ಮಾಡಿದ್ದು, ಈಗ ಸುಳ್ಳು ತಮ್ಮ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ವಿಚಾರಣೆ ವೇಳೆ ಪ್ರತ್ಯಾರೋಪ ಮಾಡಿರುವುದಾಗಿ ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರೂ ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.