ಲಕ್ನೋ:ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಸಹ ಪ್ರತಿಭಟನೆ ನಡೆಯುತ್ತಿದೆ. ಇದೀಗ ಸಂತ್ರಸ್ತೆ ಕುಟುಂಬಸ್ಥರೊಂದಿಗೆ ಯೋಗಿ ಆದಿತ್ಯನಾಥ್ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದಾರೆ.
ಸಂತ್ರಸ್ತೆ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದ ಯೋಗಿ ಈ ವೇಳೆ ಸಂತ್ರಸ್ತೆ ಕುಟುಂಬಕ್ಕೆ 25 ಲಕ್ಷ ರೂ ಘೋಷಣೆ ಮಾಡಿರುವ ಯೋಗಿ ಆದಿತ್ಯನಾಥ್, ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವುದಾಗಿ ಹೇಳಿದ್ದಾರೆ.
ಸೆಪ್ಟೆಂಬರ್ 14ರಂದು ಪಶ್ಚಿಮ ಉತ್ತರ ಪ್ರದೇಶದ ಹತ್ರಾಸ್ನಲ್ಲಿ 20 ವರ್ಷದ ಯುವತಿ ತನ್ನ ಸಹೋದರ ಹಾಗೂ ತಾಯಿ ಜತೆ ಹೊಲಕ್ಕೆ ಹೋಗಿದ್ದಳು. ಮೇವು ತೆಗೆದುಕೊಂಡು ವಾಪಸ್ ಬರುತ್ತಿದ್ದ ವೇಳೆ ಆಕೆಯ ಮೇಲೆ ನಾಲ್ವರು ಕಾಮುಕರು ಅತ್ಯಾಚಾರವೆಸಗಿದ್ದರು. ಇದಾದ ಬಳಿಕ ಆಕೆಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದ ಕಾಮುಕರು ನಾಲಿಗೆ ಕತ್ತರಿಸಿ ಪರಾರಿಯಾಗಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಾವನ್ನಪ್ಪಿದ್ದಳು.
ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನ ಈಗಾಗಲೇ ಯೋಗಿ ಸರ್ಕಾರ ಎಸ್ಐಟಿ ತನಿಖೆಗೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಸಿಎಂ ಜತೆ ಮಾತುಕತೆ ನಡೆಸಿದ್ದಾಗಿ ತಿಳಿದು ಬಂದಿದೆ. ಇದೇ ಪ್ರಕರಣವನ್ನಿಟ್ಟುಕೊಂಡು ದೆಹಲಿ ಸಿಎಂ ಕೇಜ್ರಿವಾಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಪ್ರಮುಖರು ಯೋಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.