ಅಯೋಧ್ಯೆ: ಬಹು ನಿರೀಕ್ಷಿತ ಅಯೋಧ್ಯೆಯ ಶ್ರೀರಾಮ ಮಂದಿರ ದೇಗುಲದ ಭೂಮಿ ಪೂಜೆಯ ಶಿಲಾನ್ಯಾಸ ಬರುವ ಅಗಸ್ಟ್ 5ರಂದು ನಡೆಯಲಿದ್ದು, ಅದಕ್ಕಾಗಿ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳು ಆರಂಭಗೊಂಡಿವೆ. ಇದರ ಮಧ್ಯೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ವೇಳೆ ಶ್ರೀರಾಮನ ಪೂಜೆ ನೆರವೇರಿಸಿದ ಯೋಗಿ ಆದಿತ್ಯನಾಥ್, ಭರತ, ಶತೃಘ್ನ ಹಾಗೂ ಲಕ್ಷ್ಮಣರ ಮೂರ್ತಿಗಳನ್ನ ಹೊಸ ಆಸನದ ಮೇಲೆ ಇರಿಸಿದರು. ಇದಾದ ಬಳಿಕ ಆಂಜನೇಯನ ಪೂಜೆ ಸಹ ಮಾಡಿದರು.
ಅಯೋಧ್ಯೆಯಲ್ಲಿ ಯೋಗಿ ಪೂಜೆ-ಪುನಸ್ಕಾರ
ಅಯೋಧ್ಯೆಗೆ ಭೇಟಿ ನೀಡಿ ಸಿದ್ಧತೆಗಳ ಪರಿಶೀಲನೆ ನಡೆಸಿದ ಅವರು ಕೆಲವೊಂದು ಸೂಚನೆ ನೀಡಿದರು. ಅಗಸ್ಟ್ 5ರಂದು ಮಧ್ಯಾಹ್ನ 12 ಗಂಟೆಗೆ ಭೂಮಿ ಪೂಜೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಸೇರಿದಂತೆ 300ಕ್ಕೂ ಅಧಿಕ ಗಣ್ಯರು ಭಾಗಿಯಾಗಲಿದ್ದಾರೆ.
ಅಯೋಧ್ಯೆಯಲ್ಲಿ ಭೂಮಿ ಪೂಜೆಯ ಕಾರ್ಯಕ್ರಮ ವೀಕ್ಷಣೆ ಮಾಡಲು ಎಲ್‍ಇಡಿ ವ್ಯವಸ್ಥೆ ಮಾಡಲಾಗಿದ್ದು, ಎಲ್ಲಾ ರೀತಿಯ ಯೋಜನೆ ರೂಪಿಸಲಾಗುತ್ತಿದೆ.