ಕರ್ನಾಟಕ

karnataka

ETV Bharat / bharat

ಟ್ರಂಪ್ ವಾಸ್ತವ್ಯ ಎಲ್ಲಿ: ಹೇಗಿದೆ ಈ ಹೋಟೆಲ್​ನಲ್ಲಿನ ಭದ್ರತಾ ವ್ಯವಸ್ಥೆ? - ಭಾರತಕ್ಕೆ ಟ್ರಂಪ್​ ಭೇಟಿ

ನಾಳೆ ಭಾರತಕ್ಕೆ ಭೇಟಿ ನೀಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ದಂಪತಿ ದೆಹಲಿಯ ಮೌರ್ಯ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಕೈಟ್​ ಕ್ಯಾಚರ್​, ಶಾರ್ಪ್​ ಶೂಟರ್​ ಸೇರಿದಂತೆ ಭದ್ರತಾ ವ್ಯವಸ್ಥೆಯ ಎಲ್ಲಾ ರೀತಿಯ ಸಿಬ್ಬಂದಿಯನ್ನು ಈ ಹೋಟೆಲ್​ನಲ್ಲಿ ನಿಯೋಜಿಸಲಾಗಿದೆ. ಈಗಾಗಲೇ ಹದ್ದಿನ ಕಣ್ಣಿಟ್ಟು ಹೋಟೆಲ್​ ಸುತ್ತ ಹಾಗೂ ಇಲ್ಲಿಗೆ ಸಂಧಿಸುವ ಮಾರ್ಗಗಳಲ್ಲಿ ತಮ್ಮ ಕೆಲಸವನ್ನು ಭದ್ರತಾ ಸಿಬ್ಬಂದಿ ಆರಂಭಿಸಿದ್ದಾರೆ.

Unprecedented security measures in place in Delhi for Trump's visit
ಐಟಿಸಿ ಮೌರ್ಯ ಹೋಟೆಲ್

By

Published : Feb 23, 2020, 6:17 PM IST

ನವದೆಹಲಿ: ನಾಳೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬರಲಿದ್ದು, ಅವರು ವಾಸ್ತವ್ಯ ಹೂಡಲು ಇಲ್ಲಿನ ಖ್ಯಾತ ಐಟಿಸಿ ಮೌರ್ಯ ಹೋಟೆಲ್​ನಲ್ಲಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಈ ಹೋಟೆಲ್​ನಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ. ಸೇನಾ ಮತ್ತು ಅರೆಸೇನಾ ಪಡೆಯನ್ನು ನಿಯೋಜಿಸಲಾಗಿದೆ. ಇಲ್ಲಿಗೆ ಆಗಮಿಸುವ ಪ್ರತಿಯೊಬ್ಬರನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಭಾರತೀಯ ಭದ್ರತಾ ಸಂಸ್ಥೆಗಳು ಯುಎಸ್ ಸೀಕ್ರೆಟ್ ಸರ್ವಿಸ್​ನೊಂದಿಗೆ ನಿಕಟ ಸಂಪರ್ಕ ಇರಿಸಿಕೊಂಡು ಕಾರ್ಯ ನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಮೆಲಾನಿಯಾ ಟ್ರಂಪ್​ ​

ಕೈಟ್​ ಕ್ಯಾಚರ್​, ಶಾರ್ಪ್​ ಶೂಟರ್​ ಸೇರಿದಂತೆ ಭದ್ರತಾ ವ್ಯವಸ್ಥೆಯ ಎಲ್ಲಾ ರೀತಿಯ ಸಿಬ್ಬಂದಿಯನ್ನು ಇಲ್ಲಿ ನಿಯೋಜನೆ ಮಾಡಿದ್ದು, ಈಗಾಗಲೇ ಹದ್ದಿನ ಕಣ್ಣಿಟ್ಟು ಹೋಟೆಲ್​ ಸುತ್ತ ಹಾಗೂ ಇಲ್ಲಿಗೆ ಸಂಧಿಸುವ ಮಾರ್ಗಗಳಲ್ಲಿ ತಮ್ಮ ಕೆಲಸ ಆರಂಭಿಸಿವೆ. ಇನ್ನುಳಿದಂತೆ ಭದ್ರತಾ ವ್ಯವಸ್ಥೆಗಾಗಿ ಆರು ಜಿಲ್ಲೆಗಳ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ, ಸರ್ದಾರ್ ಪಟೇಲ್ ಮಾರ್ಗದಲ್ಲಿ ರಾತ್ರಿಯಲ್ಲೂ ದೃಶ್ಯ ಸೆರೆಹಿಡಿಯುವ 100 ಸಿಸಿಟಿವಿಯನ್ನು ಅಳವಡಿಸಲಾಗಿದ್ದು, ಇವು ಹೋಟೆಲ್​ನ ಎಲ್ಲಾ ವಿಭಾಗದಲ್ಲಿಯೂ ಕೆಲಸ ಮಾಡಲಿವೆ.

ಐದು ವರ್ಷಗಳ ಹಿಂದೆ ಬರಾಕ್ ಒಬಾಮ ರಾಷ್ಟ್ರ ರಾಜಧಾನಿಗೆ ಭೇಟಿ ನೀಡಿದ್ದಾಗ ದೆಹಲಿ ಪೊಲೀಸರು 605 ಸಿಸಿಟಿವಿ ಕ್ಯಾಮರಾಗಳನ್ನು ಬಾಡಿಗೆಗೆ ಪಡೆದಿದ್ದರು. ಇವುಗಳನ್ನು ಅಳವಡಿಸಲು ಹಾಗೂ ತೆಗೆಯಲು 1 ಕೋಟಿ ರೂಪಾಯಿ ಹಣ ಖರ್ಚು ಮಾಡಲಾಗಿತ್ತು.

ಟ್ರಂಪ್​ ಜೊತೆ ಮೋದಿ

ಇರಾನ್ ಮತ್ತು ಯುಎಸ್ ನಡುವಿನ ಸಂಬಂಧ ಕೆಟ್ಟ ರೀತಿಯಲ್ಲಿ ಇರುವುದರಿಂದ ಈ ಬಾರಿ ಭದ್ರತೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ದೆಹಲಿ ಪೊಲೀಸರು ಭದ್ರತೆ ವಿಷಯವಾಗಿ ಈಗಾಗಲೇ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಟ್ರಂಪ್​ ಸಂಚರಿಸುವ ಮಾರ್ಗದಲ್ಲಿ ವಿವಿಧ ಹಂತದ ಭದ್ರತೆಯನ್ನು ಮಾಡಲಾಗಿದ್ದು, ಬೆಂಗಾವಲು ವಾಹನ ಹಾದುಹೋಗುವ ಮಾರ್ಗದಲ್ಲಿ ಡಬಲ್​ ಬ್ಯಾರಿಕೇಡ್​ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇಷ್ಟಲ್ಲದೆ, ವೈಮಾನಿಕ ಕಣ್ಗಾವಲನ್ನು ಸಹ ಇಡಲಾಗಿದೆ.

ಇನ್ನು ಯುಎಸ್ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಭೇಟಿ ನೀಡಲು ನಿರ್ಧರಿಸಿರುವ ದೆಹಲಿ ಸರ್ಕಾರಿ ಶಾಲೆಗೆ ಹೋಗುವ ಮಾರ್ಗವು ಹೆಚ್ಚಿನ ಭದ್ರತೆಯಿಂದ ಕೂಡಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತಕ್ಕೆ ಟ್ರಂಪ್​ ಭೇಟಿಯು ನಿಗದಿ ಆದ ನಂತರ ಕಳೆದ ಎರಡು ವಾರಗಳಿಂದ ಹೋಟೆಲ್‌ನಲ್ಲಿ ಈ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಎನ್‌ಎಸ್‌ಜಿ ಕಮಾಂಡೋಗಳು ಮತ್ತು ದೆಹಲಿ ಪೊಲೀಸ್ ಸಿಬ್ಬಂದಿ ಪ್ರತಿದಿನ ಹೋಟೆಲ್​ನ ಎಲ್ಲಾ ಮಹಡಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ಈ ಹೊಟೆಲ್​ನ ಎಲ್ಲಾ 438 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ABOUT THE AUTHOR

...view details