ಉನ್ನಾವೋ:ದೇಶವನ್ನೇ ಬೆಚ್ಚಿಬೀಳಿಸಿದ್ದ ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಘಟನೆಯು ಉತ್ತರಪ್ರದೇಶದ ರಾಯ್ಬರೇಲಿ ಬಳಿ ಸಂಭವಿಸಿದೆ.
ಸಂತ್ರಸ್ತೆಯು ರಾಯ್ ಬರೇಲಿಯ ಜೈಲೊಂದರಲ್ಲಿರುವ ತನ್ನ ಮಾವನನ್ನು ಭೇಟಿಯಾಗಲು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕಾರಿನಲ್ಲಿ ಸಂತ್ರಸ್ತೆ, ಆಕೆಯ ತಾಯಿ, ಅತ್ತೆ ಹಾಗೂ ವಕೀಲರೊಬ್ಬರು ತೆರಳುತ್ತಿದ್ದಾಗ ಲಾರಿಯೊಂದು ಎದುರಿನಿಂದ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದು, ಗಾಯಗೊಂಡು ಆಸ್ಪತ್ರೆಯಲ್ಲಿರುವ ಸಂತ್ರಸ್ತೆಯ ಸ್ಥಿತಿ ಗಂಭೀರವಾಗಿದೆ. ಖಾಲಿ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.