ನವದೆಹಲಿ:ಉನ್ನಾವೊ ಅತ್ಯಾಚಾರ, ಕೊಲೆ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಬಗೆಗಿನ ತೀರ್ಪನ್ನು ದೆಹಲಿ ನ್ಯಾಯಾಲಯ ಡಿಸೆಂಬರ್ 16ಕ್ಕೆ ಕಾಯ್ದಿರಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಹಾಜರಾಗಲು ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಸಂಚರಿಸುತ್ತಿದ್ದ ಕಾರಿಗೆ ಅಪಘಾತ ಮಾಡಿ ಆಕೆ ಹತ್ಯೆಗೆ ಸಂಚು ರೂಪಿಸಿದ ಗಂಭೀರ ಆರೋಪಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಮೇಲಿದೆ.
ಅದೃಷ್ಟಾವಶಾತ್ ಅಂದು ಆಕೆ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಬಗ್ಗೆ, ಮಾಜಿ ಶಾಸಕ ಹಾಗೂ ಆತನ ಸಹೋದರ ಮನೋಜ್ ಸಿಂಗ್ ಸೆಂಗಾರ್ ಸೇರಿ 8 ಮಂದಿಯ ವಿರುದ್ಧ ಜುಲೈ 29ರಂದು ದೂರು ದಾಖಲಾಗಿತ್ತು.
ಸಂತ್ರಸ್ತೆ ಚಿಕ್ಕಪ್ಪ ಮಹೇಶ್ ಸಿಂಗ್ ನೀಡಿದ ದೂರಿನಡಿ, ಕುಲದೀಪ್ ಸಿಂಗ್ ಸೆಂಗಾರ್ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆಗೆ ಶಿಕ್ಷೆ), 307 (ಕೊಲೆ ಯತ್ನ), 506 (ಕೊಲೆ ಬೆದರಿಕೆ) ಮತ್ತು 120–'ಬಿ' (ಅಪರಾಧಕ್ಕೆ ಒಳಸಂಚು) ಪೊಲೀಸರು ಕೇಸ್ ಹಾಕಿದ್ದರು. ಸಂತ್ರಸ್ತೆಯ ಕುಟುಂಬವನ್ನು ಕೊಲೆ ಮಾಡುವ ಹುನ್ನಾರವನ್ನು ಸೆಂಗಾರ್ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಡಿ.5 ರಂದು ಸಂತ್ರಸ್ತೆ ಮತ್ತೊಮ್ಮೆ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಲು ತೆರಳುತ್ತಿದ್ದ ಸಂದರ್ಭ ಜಾಮೀನಿನಿಂದ ಬಿಡುಗಡೆಯಾಗಿದ್ದ ಪ್ರಕರಣದ ಐವರು ಆರೋಪಿಗಳು ಆಕೆಗೆ ಬೆಂಕಿ ಹಚ್ಚಿದ್ದರು. ಸ್ಥಳೀಯರ ನೆರವಿನಿಂದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಶೇ 90 ರಷ್ಟು ಬೆಂದಿದ್ದ ದೇಹ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಹೀಗಾಗಿ ಆಕೆ ಎರಡು ದಿನಗಳ ಹಿಂದೆ ಕೊನೆಯುಸಿರೆಳೆದಳು.