ನವದೆಹಲಿ:2017ರಲ್ಲಿನ ಉನ್ನಾವೋ ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಈಗಾಗಲೇ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕುಲದೀಪ್ ಸಿಂಗ್ ಸೆಂಗಾರ್ ವಿರುದ್ಧ ಇದೀಗ ಸಂತ್ರಸ್ತೆಯ ತಂದೆ ಕೊಲೆ ಪ್ರಕರಣದಲ್ಲೂ ಶಿಕ್ಷೆ ಪ್ರಕಟಗೊಂಡಿದೆ. ಸಂತ್ರಸ್ತೆಯ ತಂದೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಈಗಾಗಲೇ ತಪ್ಪಿತಸ್ಥನಾಗಿರುವ ಬಿಜೆಪಿ ಉಚ್ಛಾಟಿತ ಶಾಸಕ ಕುಲ್ದೀಪ್ ಸಿಂಗ್ಗೆ ದೆಹಲಿ ನ್ಯಾಯಾಲಯ ಇಂದು ಶಿಕ್ಷೆ ವಿಧಿಸಿ ಆದೇಶ ಹೊರಹಾಕಿದೆ.
ಮಾರ್ಚ್ 4ರಂದು ಪ್ರಕರಣದ ವಿಚಾರಣೆ ನಡೆಸಿದ್ದ ದೆಹಲಿ ಕೋರ್ಟ್ ಉನ್ನಾವೋ ಅಪ್ರಾಪ್ತೆ ಬಾಲಕಿಯ ತಂದೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್ ಸೆಂಗರ್ ದೋಷಿ ಎಂದು ತೀರ್ಪು ನೀಡಿತ್ತು. ಇದರ ಜತೆಗೆ ಏಳು ಮಂದಿ ಆರೋಪಿಗಳೂ ಸಹ ದೋಷಿ ಎಂದಿದ್ದ ಕೋರ್ಟ್, ನಾಲ್ವರನ್ನ ಪ್ರಕರಣದಿಂದ ಖುಲಾಸೆಗೊಳಿಸಿ ಆದೇಶ ಹೊರಡಿಸಿತ್ತು. ಇದೀಗ ಶಿಕ್ಷೆ ವಿಧಿಸಿ ಆದೇಶ ಹೊರಹಾಕಿರುವ ಕೋರ್ಟ್ ಕುಲ್ದೀಪ್ ಸಿಂಗ್ ಸೆಂಗಾರ್ ಸೇರಿದಂತೆ 7 ಆರೋಪಿಗಳಿಗೆ 10 ವರ್ಷ ಶಿಕ್ಷೆ ಪ್ರಕಟಿಸಿದೆ. ಇದರೊಂದಿಗೆ ಎಲ್ಲಾ ಆರೋಪಿಗಳಿಗೆ 10 ಲಕ್ಷ ರೂ.ಗಳ ದಂಡವನ್ನೂ ವಿಧಿಸಲಾಗಿದೆ.