ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಭಾರತ 8ನೇ ಬಾರಿ ಚುನಾಯಿತವಾಗಿದೆ. 2021ರ ಜನೇವರಿ 1 ರಿಂದ ಭಾರತದ ಅಧಿಕಾರಾವಧಿ ಆರಂಭವಾಗಲಿದ್ದು, ಮುಂದಿನ 2 ವರ್ಷಗಳ ಅವಧಿಗೆ ಭಾರತದ ಸದಸ್ಯತ್ವ ಮುಂದುವರಿಯಲಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯ ಸ್ಥಾನಗಳಿಗೆ ನಡೆಯುವ ಚುನಾವಣೆ ಪ್ರಕ್ರಿಯೆ ಹೇಗಿರುತ್ತದೆ, ನಿಯಮಗಳೇನು ಎಂಬುದನ್ನು ತಿಳಿಯೋಣ.
ಖಾಯಂ ಅಲ್ಲದ ಸದಸ್ಯ ರಾಷ್ಟ್ರಗಳ ಚುನಾವಣೆ ಪ್ರಕ್ರಿಯೆ
ವಿಶ್ವಸಂಸ್ಥೆ ನಿಯಮಾವಳಿಯ ಆರ್ಟಿಕಲ್ 23 ರ ಅನುಬಂಧದ ತಿದ್ದುಪಡಿಯಂತೆ (ಡಿಸೆಂಬರ್ 17, 1963 ರಂದು ಮಾಡಲಾದ ತಿದ್ದುಪಡಿ (ಗೊತ್ತುವಳಿ 1991, ಎ (XVIII)), 31 ಆಗಸ್ಟ್ 1965 ರಂದು ಜಾರಿಗೆ ಬಂದಂತೆ ಸಾಮಾನ್ಯ ಸಭೆಯು ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯ ರಾಷ್ಟ್ರಗಳ ಸಂಖ್ಯೆಯನ್ನು 6 ರಿಂದ 10 ಕ್ಕೆ ಏರಿಸಲಾಯಿತು.
ಭದ್ರತಾ ಮಂಡಳಿಗೆ ಚೀನಾ, ಫ್ರಾನ್ಸ್, ರಶಿಯನ್ ಒಕ್ಕೂಟ, ಯುನೈಟೆಡ್ ಕಿಂಗಡಮ್ ಮತ್ತು ಅಮೆರಿಕ ದೇಶಗಳು ಖಾಯಂ ಸದಸ್ಯ ರಾಷ್ಟ್ರಗಳಾಗಿರುತ್ತವೆ. ಖಾಯಂ ಅಲ್ಲದ 10 ಸದಸ್ಯ ರಾಷ್ಟ್ರಗಳನ್ನು ಸಾಮಾನ್ಯ ಸಭೆಯು ಚುನಾವಣೆಯ ಮೂಲಕ ಆರಿಸುತ್ತದೆ.
142ನೇ ನಿಯಮದ ಪ್ರಕಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಪ್ರತಿ ವರ್ಷ 5 ಸದಸ್ಯರನ್ನು ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯರನ್ನಾಗಿ ಆಯ್ಕೆ ಮಾಡುತ್ತದೆ. 1963 ರಲ್ಲಿ ನಡೆದ 18ನೇ ಸಾಮಾನ್ಯ ಸಭೆಯಲ್ಲಿ ಖಾಯಂ ಅಲ್ಲದ ಸದಸ್ಯ ರಾಷ್ಟ್ರಗಳ ಆಯ್ಕೆಗೆ ಈ ಕೆಳಗಿನಂತೆ ಮಾನದಂಡಗಳನ್ನು ರೂಪಿಸಲಾಯಿತು.
- ಆಫ್ರಿಕಾ ಮತ್ತು ಏಶಿಯಾದ ಐದು ರಾಷ್ಟ್ರಗಳು
- ಪೂರ್ವ ಯುರೋಪಿನ ಒಂದು ದೇಶ
- ಲ್ಯಾಟಿನ್ ಅಮೆರಿಕೆಯ ಎರಡು ದೇಶಗಳು
- ಪಶ್ಚಿಮ ಯುರೋಪ್ ಮತ್ತು ಇತರೆಡೆಯ ಎರಡು ದೇಶಗಳು