ಭಾರತ್ಪುರ (ರಾಜಸ್ಥಾನ):ಸಾವು ಅಂದ್ರೆ ರೋಧನೆ, ಕಣ್ಣೀರು ಸಾಮಾನ್ಯ. ಆದ್ರೆ ಪರಿಪೂರ್ಣವಾಗಿ ಜೀವಿಸಿದ ಹಿರಿಯ ವೃದ್ಧೆಯೊಬ್ಬರ ಅಂತಿಮ ಯಾತ್ರೆಯನ್ನು ಸಂಭ್ರಮದಿಂದ ಹಬ್ಬದಂತೆ ಆಚರಿಸಿದ್ದಾರೆ. ವೃದ್ಧೆಯ ಅಗಲಿಕೆಯ ನೋವಲ್ಲೂ ಗ್ರಾಮಸ್ಥರು, ಕುಟುಂಬಸ್ಥರು ಹಬ್ಬವೆಂಬಂತೆ ಹಾಡಿಗೆ ಕುಣಿದು ಅಂತಿಮ ವಿದಾಯ ಹೇಳಿದ್ದಾರೆ.
ಜಿಲ್ಲೆಯ ನಡ್ಬಾಯಿ ಪಟ್ಟಣ ಅಪರೂಪದ ಪ್ರಸಂಗಕ್ಕೆ ಸಾಕ್ಷಿಯಾಗಿದೆ. ಇಡೀ ಪಟ್ಟಣಕ್ಕೆ ಹಿರಿಯರು ಎನಿಸಿಕೊಂಡಿದ್ದ ದುರ್ಗಾ ಸಿಂಗ್ (115) ಅವರಿಗೆ ಸಂಭ್ರಮದ ಮೂಲಕ ಸ್ಥಳೀಯರು ಅಂತಿಮ ಯಾತ್ರೆ ನೆರವೇರಿಸಿದರು.
ಶತಾಯುಷಿ ಅಜ್ಜಿಗೆ ಡಿಜೆ ವಿದಾಯ. ತಮ್ಮ ಇಡೀ ಜೀವನವನ್ನು ಇದೇ ಗ್ರಾಮದಲ್ಲಿ ಕಳೆದಿದ್ದ ದುರ್ಗಾ ಸಿಂಗ್ ಅವರು ಗ್ರಾಮದಲ್ಲಿ ಅತಿ ಹಿರಿಯ ಜೀವ ಎನಿಸಿಕೊಂಡಿದ್ದರು ಮತ್ತು ಎಲ್ಲರಿಗೂ ಅಚ್ಚುಮೆಚ್ಚು. ಈ ಹಿನ್ನೆಲೆ ಕುಟುಂಬಸ್ಥರು ಹಾಗೂ ಸ್ಥಳೀಯರು ವೃದ್ಧೆಗೆ ಸಂಭ್ರಮದಿಂದ ಅಂತಿಮ ಬೀಳ್ಕೊಡುಗೆ ನೀಡಲು ನಿರ್ಧರಿಸಿದ್ದರು. ಅಂತೆಯೇ ಅಜ್ಜಿಯ ಅಂತಿಮ ಯಾತ್ರೆಯಲ್ಲಿ ಡಿಜೆ ಹಚ್ಚಿ ನೃತ್ಯ ಮಾಡಿದ್ದಾರೆ. ಊರವರೆಲ್ಲ ಸೇರಿ ಹಾಡು, ನೃತ್ಯ ಮಾಡಿ ಬೀಳ್ಕೊಟ್ಟಿದ್ದಾರೆ.
ರಾಜಸ್ಥಾನದ ಹಲವು ಕಡೆ ವಾದ್ಯಗೋಷ್ಠಿಯೊಂದಿಗೆ ಶವವನ್ನು ಸ್ಮಶಾನಕ್ಕೆ ಒಯ್ಯುವ ಸಂಪ್ರದಾಯವಿದೆ. ಆದರೆ ಈ ರೀತಿಯಾಗಿ ಡಿಜೆ ಬಳಸಿರುವುದು ಇದೇ ಮೊದಲು ಎಂದು ತಿಳಿದುಬಂದಿದೆ.