ನವದೆಹಲಿ:ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್, ನಿತಿನ್ ಗಡ್ಕರಿ ಮತ್ತು ನರೇಂದ್ರ ತೋಮರ್ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ್ದಾರೆ.
ಕೇಂದ್ರ ಸರ್ಕಾರ ತನ್ನ ಎರಡನೇ ಆಡಳಿತಾವಧಿಯ ಮೊದಲ ವರ್ಷವನ್ನು ಪೂರೈಸಿದ ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆ ಇದಾಗಿದೆ. ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಬಗ್ಗೆ ಸಚಿವರು ಸುದ್ದಿಗೋಷ್ಠಿ ಮೂಲಕ ಜನರಿಗೆ ಮಾಹಿತಿ ನೀಡಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಇದು ರೈತರು, ಎಂಎಸ್ಎಂಇ(ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ಮತ್ತು ಅನೌಪಚಾರಿಕ ವಲಯದಲ್ಲಿ ತೊಡಗಿರುವವರ ಜೀವನವನ್ನು ಬದಲಾಯಿಸುತ್ತದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದರು.
ದೇಶ ಕಟ್ಟುವಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪಾತ್ರ ಮಹತ್ವದ್ದು ಎಂದು ಪ್ರಧಾನಮಂತ್ರಿ ಗುರುತಿಸಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರದ ಆತ್ಮ ನಿರ್ಭರ ಭಾರತ ವಿಶೇಷ ಪ್ಯಾಕೇಜ್ನಡಿ ಈ ವರ್ಗಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ. ಒತ್ತಡಕ್ಕೊಳಗಾದ ಎಂಎಸ್ಎಂಇಗಳಿಗೆ 20,000 ಕೋಟಿ ರೂ.ಗಳ ಸಾಲ(subordinate debt) ನೀಡಲು ಸಂಪುಟ ಅನುಮೋದನೆ ನೀಡಿದೆ. ಇದರಿಂದ ಸುಮಾರು 2 ಲಕ್ಷ ಎಂಎಸ್ಎಂಇಗಳಿಗೆ ಅನುಕೂಲವಾಗಲಿದೆ ಎಂದು ಜಾವಡೇಕರ್ ತಿಳಿಸಿದರು.
ಎಂಎಸ್‌ಎಂಇಗಳಿಗಾಗಿ 50,000 ಕೋಟಿ ರೂ.ಗಳ ನಿಧಿ ಸ್ಥಾಪಿಸಲು ನಾವು ಅನುಮೋದನೆ ನೀಡಿದ್ದೇವೆ. ಈ ಉದ್ದೇಶಿತ ನಿಧಿ ಎಂಎಸ್‌ಎಂಇ ವಲಯದಲ್ಲಿ ಖಾಸಗಿ ವಲಯದ ಹೂಡಿಕೆಗಳನ್ನು ಉತ್ತೇಜಿಸುತ್ತದೆ ಎಂದು ಸಚಿವರು ಹೇಳಿದ್ದಾರೆ.
ರೈತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು 50ರಿಂದ 83% ಹೆಚ್ಚಿಸಲಾಗಿದೆ. ರೈತರಿಗೆ ತಮ್ಮ ಸಾಲವನ್ನು ಮರುಪಾವತಿಸಲು ಆಗಸ್ಟ್ 31ರವರೆಗೆ ಸಮಯಾವಕಾಶ ನೀಡಲಾಗಿದೆ. ರೈತರು ಯಾವುದೇ ಬಾಕಿ ಹಣ ಉಳಿಸಿಕೊಂಡಿರದಿದ್ದರೆ 4 ಪ್ರತಿಶತದಷ್ಟು ಬಡ್ಡಿ ದರದಲ್ಲಿ ಮತ್ತೆ ಸಾಲ ಪಡೆಯಬಹುದು ಎಂದು ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ತೋಮರ್ ಹೇಳಿದ್ದಾರೆ.