ನವದೆಹಲಿ : ದೇಶದಲ್ಲಿ ಜನವರಿ 16 ರಿಂದ ಕೋವಿಡ್ ವ್ಯಾಕ್ಸಿನ್ ನೀಡಲಾಗುತ್ತಿದ್ದು, ಇಂದಿನಿಂದಲೇ ಎಲ್ಲ ರಾಜ್ಯಗಳಿಗೆ ಲಸಿಕೆ ಸರಬರಾಜು ಮಾಡಲಾಗುತ್ತಿದೆ.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕುಸಿಯುತ್ತಿದ್ದು ಸದ್ಯ 2.2 ಲಕ್ಷ ಆ್ಯಕ್ಟಿವ್ ಕೇಸ್ಗಳಿವೆ. ಅದರಲ್ಲೂ ಮಹಾರಾಷ್ಟ್ರ ಮತ್ತು ಕೇರಳದಲ್ಲಿ 50 ಸಾವಿರಕ್ಕೂ ಹೆಚ್ಚು ಸೋಂಕಿತರಿದ್ದಾರೆ ಎಂದರು.
ಎರಡು ಡೋಸೇಜ್ಗಳನ್ನು ಪಡೆದ ಬಳಿಕವೂ ಜಾಗರೂಕರಾಗಿರಬೇಕು. ಯಾಕೆಂದರೆ ಡೋಸೇಜ್ ಮಾನವನ ದೇಹ ಸೇರಲು 14 ದಿನಗಳನ್ನು ತೆಗೆದುಕೊಳ್ಳುತ್ತದೆ. ಅನೇಕ ದೇಶಗಳಲ್ಲಿ ಒಂದಕ್ಕಿಂತ ಹೆಚ್ಚು ಲಸಿಕೆಗಳನ್ನು ಬಳಸಲಾಗುತ್ತಿದೆ. ಆದರೆ ಭಾರತದಲ್ಲಿ ಅಂಥ ಯಾವುದೇ ಆಯ್ಕೆಗಳಿಲ್ಲ. ಕೋವಾಕ್ಸಿನ್ ಹಾಗೂ ಕೋವಿಶೀಲ್ಡ್ ಎರಡನ್ನೂ ನೀಡಲಾಗುತ್ತದೆ ಎಂದು ರಾಜೇಶ್ ಭೂಷಣ್ ತಿಳಿಸಿದ್ದಾರೆ.
ನೀತಿ ಆಯೋಗದ ಸದಸ್ಯ ಡಾ. ವಿ.ಕೆ.ಪಾಲ್ ಮಾತನಾಡಿ, ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿದ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಗಳನ್ನು ಸ್ವೀಕರಿಸಲು ಮತ್ತು ಬೆಂಬಲಿಸಲು ಭಾರತೀಯ ವೈದ್ಯಕೀಯ ಸಂಸ್ಥೆ ನಿರ್ಧರಿಸೋದು ಹೆಮ್ಮೆಯ ಸಂಗತಿ. ಇದಕ್ಕಾಗಿ ನಾನವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ವ್ಯಾಕ್ಸಿನ್ಗಳ ಸುರಕ್ಷತೆಯ ಬಗ್ಗೆ ಯಾವುದೇ ಅನುಮಾನವಿಲ್ಲ. ಅವುಗಳನ್ನು ಸಾವಿರಾರು ಜನರ ಮೇಲೆ ಪ್ರಯೋಗ ಮಾಡಲಾಗಿದ್ದು, ಯಾವುದೇ ಅಡ್ಡಪರಿಣಾಮಗಳು ಉಂಟಾಗಿಲ್ಲ ಎಂದು ಸ್ಪಷ್ಟಪಡಿಸಿದರು.